ಹುತಾತ್ಮರ ಸ್ಮಾರಕದಲ್ಲಿ ಸಾಯಿಬಾಬಾ ಪಾರ್ಥಿವ ಶರೀರ ಇರಿಸಲು ಅನುಮತಿ ನಿರಾಕರಿಸಿದ ಪೊಲೀಸರು

PC : ಜಿ.ಎನ್. ಸಾಯಿಬಾಬಾ
ಹೈದರಾಬಾದ್ : ಹೈದರಾಬಾದ್ನ ಗನ್ ಪಾರ್ಕ್ನಲ್ಲಿರುವ ತೆಲಂಗಾಣ ಹುತಾತ್ಮರ ಸ್ಮಾರಕದಲ್ಲಿ ಪ್ರಾದ್ಯಾಪಕ, ಮಾನವ ಹಕ್ಕುಗಳ ಹೋರಾಟಗಾರ ಜಿ.ಎನ್. ಸಾಯಿಬಾಬಾ ಅವರ ಪಾರ್ಥಿವ ಶರೀರವನ್ನು ಇರಿಸಲು ತೆಲಂಗಾಣ ಪೊಲೀಸರು ಸಾಯಿಬಾಬಾ ಅವರ ಕುಟುಂಬಕ್ಕೆ ಹಾಗೂ ಸಾಮಾಜಿಕ ಹೋರಾಟಗಾರರಿಗೆ ಅನುಮತಿ ನಿರಾಕರಿಸಿದರು.
ಪೊಲೀಸರೊಂದಿಗೆ ಹಲವು ಗಂಟೆಗಳ ಕಾಲ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಸಾಯಿಬಾಬಾ ಅವರ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್ನಲ್ಲೇ ಇರಿಸಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫಾರಂ ಎಗೈನ್ಸ್ಟ್ ರೆಪ್ರೆಷನ್ನ ಸಂಚಾಲಕ ಕೆ. ರವಿಚಂದರ್, ಹುತಾತ್ಮರ ಸ್ಮಾರಕದ ಒಳಗೆ ಸಾಯಿಬಾಬಾ ಅವರ ಪಾರ್ಥಿವ ಶರೀರವನ್ನು ಇರಿಸಲು ಪೊಲೀಸರು ಅವಕಾಶ ನೀಡಿಲ್ಲ ಎಂದಿದ್ದಾರೆ. ತೆಲಂಗಾಣ ಚಳುವಳಿಗೆ ಜಿ.ಎನ್. ಸಾಯಿಬಾಬಾ ನೀಡಿದ ಕೊಡುಗೆಗಾಗಿ ನಾವು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
ಸಾಯಿಬಾಬಾ ಅವರ ಪಾರ್ಥಿವ ಶರೀರವನ್ನು ಹುತಾತ್ಮರ ಸ್ಮಾರಕದಲ್ಲಿ ಇರಿಸಲು ಪೊಲೀಸರು ಅನುಮತಿ ನಿರಾಕರಿಸಿರುವ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ.
‘‘ಇದು ಪ್ರೀತಿಯ ಅಂಗಡಿಯೇ? ನೀವು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಾ ರಾಹುಲ್ ಗಾಂಧಿ ಜಿ ?’’ ಇದು ನಾಚಿಕೆಗೇಡಿನ ದ್ವಿಮುಖ ನೀತಿ ! ನಿಮ್ಮ ಪಕ್ಷದ ಸಹೋದ್ಯೋಗಿ ರೇವಂತ್ ರೆಡ್ಡಿ ಅವರ ಸೂಚನೆಗೆ ಅನುಗುಣವಾಗಿ ತೆಲಂಗಾಣ ಪೊಲೀಸರು ಹೈದರಾಬಾದ್ನಲ್ಲಿರುವ ತೆಲಂಗಾಣ ಹುತಾತ್ಮರ ಸ್ಮಾರಕದಲ್ಲಿ ಸಾಯಿಬಾಬಾ ಅವರ ಪಾರ್ಥಿವ ಶರೀರ ಇರಿಸಲು ತಡೆ ಒಡ್ಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್ ಒಂದು ಹೇಳಿದೆ.
ಈ ಕ್ರೂರ ಕಾನೂನಿನ ಕುರಿತು ಸಾಯಿಬಾಬಾ ಅವರ ಕುಟುಂಬದ ಸದಸ್ಯರು, ನಾಗರಿಕ ಸಮಾಜದ ನಾಯಕರು ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಯಿಬಾಬಾ ಅವರ ಪಾರ್ಥಿವ ಶರೀರ ಆ್ಯಂಬುಲೆನ್ಸ್ನಲ್ಲಿ ಇದ್ದರೂ ಅವರು ಹುತಾತ್ಮರ ಸ್ಮಾರಕದಲ್ಲಿ ಸಾಯಿಬಾಬಾ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಉದ್ವಿಗ್ನತೆ ಸೃಷ್ಟಿಯಾದ ನಡುವೆ ಸಾಯಿಬಾಬಾ ಅವರ ಮೃತದೇಹವನ್ನು ಗನ್ ಪಾರ್ಕ್ನಿಂದ ಮೌಲಾ ಅಲಿಯಲ್ಲಿರುವ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಯಿತು ಎಂದು ತೆಲಂಗಾಣ ಡಿಜಿಟಲ್ ಮೀಡಿಯಾದ ಮಾಜಿ ನಿರ್ದೇಶಕ ಕೊನಾಥಮ್ ದಿಲೀಪ್ ಟ್ವೀಟ್ ಮಾಡಿದ್ದಾರೆ.







