ಆಗಸ್ಟ್ ತಿಂಗಳೊಳಗೆ ಆಸ್ತಿ ಘೋಷಿಸದಿದ್ದರೆ ಸಂಬಳ ಕಡಿತ: ಸರಕಾರಿ ನೌಕರರಿಗೆ ಉತ್ತರ ಪ್ರದೇಶ ಸರಕಾರ ಎಚ್ಚರಿಕೆ

ಯೋಗಿ ಆದಿತ್ಯನಾಥ್ | PC : PTI
ಲಕ್ನೊ: ರಾಜ್ಯ ಸರಕಾರಿ ನೌಕರರು ಆಗಸ್ಟ್ ತಿಂಗಳ ಒಳಗೆ ತಮ್ಮ ಆಸ್ತಿಯನ್ನು ಘೋಷಿಸಲು ವಿಫಲರಾದರೆ, ಅವರ ವೇತನವನ್ನು ತಡೆಹಿಡಿಯಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಎಚ್ಚರಿಕೆ ನೀಡಿದೆ ಎಂದು timesofindia ವರದಿ ಮಾಡಿದೆ.
ರಾಜ್ಯ ಸರಕಾರದ ನೌಕರರಲ್ಲಿ ಒಂದು ಭಾಗದಷ್ಟು ಮಂದಿ ಮಾತ್ರ ಮಾನವ ಸಂಪನ್ಮೂಲ ವೆಬ್ಸೈಟ್ನಲ್ಲಿ ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿವಿಧ ಇಲಾಖಾ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಅವರು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಂತಿಮ ಗಡುವು ಆಗಸ್ಟ್ 31, 2024 ಆಗಿರುತ್ತದೆ. 2023ರ ವರೆಗಿನ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದವರು ಮಾತ್ರ ಆಗಸ್ಟ್ ಗೆ ತಮ್ಮ ವೇತನವನ್ನು ಪಡೆಯುತ್ತಾರೆ ಎಂದು ತಿಳಿಸಿದ್ದಾರೆ. ಈ ಹಿಂದೆ ಹಲವು ಬಾರಿ ಆಸ್ತಿ ವಿವರ ಸಲ್ಲಿಸಲು ಗಡುವು ನೀಡಲಾಗಿತ್ತು. ಬಳಿಕ ಅಂತಿಮ ಗಡುವು ವಿಸ್ತರಣೆ ಮಾಡಲಾಗಿತ್ತು.
ಆಗಸ್ಟ್ 18, 2023 ರ ಆದೇಶದಲ್ಲಿ, ಎಲ್ಲಾ ನೌಕರರು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳನ್ನು ಡಿಸೆಂಬರ್ 31, 2023 ರೊಳಗೆ ಘೋಷಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಘೋಷಣೆ ಮಾಡಲು ವಿಫಲರಾದವರನ್ನು ಜನವರಿ 1, 2024 ರ ನಂತರ ಬಡ್ತಿಗೆ ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿತ್ತು.
ಬಳಿಕ ಇನ್ನೊಂದು ಆದೇಶದಲ್ಲಿ ಜೂನ್ 6 ರಂದು ಗಡುವನ್ನು ಜೂನ್ 30 ರವರೆಗೆ ವಿಸ್ತರಿಸಲಾಯಿತು. ಈ ಗಡುವನ್ನು ಪೂರೈಸಲು ವಿಫಲವಾದರೆ ಉತ್ತರ ಪ್ರದೇಶ ಸರ್ಕಾರಿ ನೌಕರರ ಶಿಸ್ತು ಮತ್ತು ಮೇಲ್ಮನವಿ ನಿಯಮಗಳು 1999 ರ ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿತ್ತು. ಗಡುವನ್ನು ಮತ್ತೆ ಜುಲೈ 31ಕ್ಕೆ ವಿಸ್ತರಿಸಲಾಯಿತು.
"ಮಾನವ ಸಂಪನ್ಮೂಲ ಪೋರ್ಟಲ್ನಲ್ಲಿ ಆಸ್ತಿಯನ್ನು ಘೋಷಿಸುವ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಮಾಡಲಾಗುತ್ತಿರುವುದರಿಂದ, ವ್ಯವಸ್ಥೆಯಲ್ಲಿ ಉದ್ಭವಿಸಬಹುದಾದ ಆರಂಭಿಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಅವಕಾಶವನ್ನು ನೀಡಲಾಗುವುದು" ಎಂದು ಗಡುವು ವಿಸ್ತರಣೆ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಸರಕಾರಿ ನೌಕರರು ಆಸ್ತಿ ಘೋಷಣೆಗೆ ಗಡುವು ವಿಸ್ತರಣೆಯ ಬಳಿಕವೂ ಸರಕಾರ ತನ್ನ ಆದೇಶವನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ, ಎಂದು ಪ್ರತಿಪಕ್ಷಗಳು ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ಟೀಕಿಸಿದ್ದವು.







