ಸಂಭಲ್ ಸಿಜೆಎಂ ವರ್ಗಾವಣೆ| ನ್ಯಾಯಾಂಗ ಸ್ವಾತಂತ್ರ್ಯದ ಮೇಲಿನ ದಾಳಿ: ಕಾಂಗ್ರೆಸ್

ಪವನ್ ಖೇರಾ| PC : thehindu
ಹೊಸದಿಲ್ಲಿ,ಜ. 14: ಸಂಭಲ್ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಿರ್ದೇಶಿಸಿದ್ದ ಸಂಭಲ್ನ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ವಿಭಾಂಶು ಸುಧೀರ್ ಅವರ ವರ್ಗಾವಣೆ ಕುರಿತಂತೆ ಕಾಂಗ್ರೆಸ್ ಶನಿವಾರ ಬಿಜೆಪಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಇದು ಆಡಳಿತಾತ್ಮಕ ಕ್ರಮವಲ್ಲ. ಬದಲಾಗಿ ನ್ಯಾಯಾಂಗ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ಹೇಳಿದೆ.
ವಿಭಾಂಶು ಸುಧೀರ್ ಅವರ ನಿರಂಕುಶ ಹಾಗೂ ತೀವ್ರ ಆತಂಕಕಾರಿ ವರ್ಗಾವಣೆಯನ್ನು ಸ್ವಯಂ ಪ್ರೇರಿತವಾಗಿ ಗಮನಕ್ಕೆ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಹಾಗೂ ಅಲಬಾಬಾದ್ ಉಚ್ಚ ನ್ಯಾಯಾಲಯವನ್ನು ಕಾಂಗ್ರೆಸ್ ಆಗ್ರಹಿಸಿದೆ.
ದೇಶದಲ್ಲಿ ಕಾನೂನನ್ನು ಎತ್ತಿ ಹಿಡಿಯಲು, ಸಾಂಸ್ಥಿಕ ಸ್ವಾಯತ್ತತೆಯನ್ನು ರಕ್ಷಿಸಲು ಹಾಗೂ ಪ್ರಜಾಸತ್ತಾತ್ಮಕ ಆಡಳಿತ ಇನ್ನಷ್ಟು ನಾಶವಾಗುವುದನ್ನು ತಡೆಯಲು ನ್ಯಾಯಾಂಗದ ಸಕಾಲಿಕ ಮಧ್ಯಪ್ರವೇಶ ಅತ್ಯಗತ್ಯವಾಗಿದೆ ಎಂದು ಕಾಂಗ್ರೆಸ್ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹೇಳಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪವನ್ ಖೇರಾ, ಸಂಭಲ್ ಹಿಂಸಾಚಾರಕ್ಕೆ ಮುನ್ನ ನಡೆದ ಜಾಮಾ ಮಸೀದಿಯ ವಿವಾದಾತ್ಮಕ ಸಮೀಕ್ಷೆಗೆ ಆದೇಶ ನೀಡಿದ್ದ ನ್ಯಾಯಾಧೀಶರನ್ನೇ ವಿಭಾಂಶು ಸುಧೀರ್ ಅವರ ಸ್ಥಾನಕ್ಕೆ ನೇಮಕ ಮಾಡುವ ಆರಂಭಿಕ ಪ್ರಯತ್ನ ಇನ್ನೂ ಹೆಚ್ಚು ಆತಂಕಕಾರಿಯಾಗಿದೆ ಎಂದಿದ್ದಾರೆ.







