‘ಮಧ್ಯಪ್ರದೇಶ, ಛತ್ತೀಸ್ಗಢದಲ್ಲೂ ಇದೇ ವಿಧಾನ’ : ಮತ್ತೆ ಮತಗಳ್ಳತನ ಆರೋಪಿಸಿದ ರಾಹುಲ್ ಗಾಂಧಿ

Photo Credit: ANI
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಕುರಿತು ಮಾಡಿದ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಹರ್ಯಾಣ ವಿಧಾನಸಭಾ ಚುನಾವಣೆ ಪ್ರತ್ಯೇಕ ಪ್ರಕರಣವಲ್ಲ, ಇದೇ ವಿಧಾನವನ್ನು ಬಿಜೆಪಿ ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ಮಹಾರಾಷ್ಟ್ರದಲ್ಲಿಯೂ ಬಳಸಿದೆ ಎಂದು ಆರೋಪಿಸಿದ್ದಾರೆ.
ರವಿವಾರ ಮಧ್ಯಪ್ರದೇಶದ ಪನರ್ಪಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಹರ್ಯಾಣದಲ್ಲಿ ಮತ ಕಳ್ಳತನ ಹೇಗೆ ನಡೆಯಿತು ಎಂಬುದಕ್ಕೆ ಸಂಬಂಧಿಸಿದಂತೆ ನಾನು ಪತ್ರಿಕಾಗೋಷ್ಠಿಯಲ್ಲಿ ಮಂಡಿಸಿದ ಅಂಕಿಅಂಶಗಳನ್ನು ನೋಡಿದ ಬಳಿಕ, ಇದೇ ರೀತಿಯ ಮತದಾರರ ಪಟ್ಟಿಗಳನ್ನು ಬಿಜೆಪಿ ಇತರ ರಾಜ್ಯಗಳಲ್ಲಿಯೂ ನಡೆಸಿದೆ ಎನ್ನುವುದು ಸ್ಪಷ್ಟವಾಗಿದೆ. ನಮ್ಮ ಬಳಿ ಸಾಕ್ಷ್ಯಗಳಿವೆ; ಅದನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಈಗಾಗಲೇ ತೋರಿಸಿರುವುದು ಅದರ ಒಂದು ಅಂಶ ಮಾತ್ರ,” ಎಂದು ಹೇಳಿದ್ದಾರೆ.
“ಮತಗಳ್ಳತನವನ್ನು ಸಾಂಸ್ಥೀಕರಿಸುವ ಪ್ರಯತ್ನ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಮೇಲಿನ ನೇರ ದಾಳಿ” ಎಂದು ಅವರು ಆರೋಪಿಸಿದರು.
“ಪ್ರಜಾಪ್ರಭುತ್ವದ ಈ ಸಂಪೂರ್ಣ ಕಳ್ಳತನದ ವಿರುದ್ಧ ದೇಶದ ಯುವಕರು ಎದ್ದು ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ” ಎಂದು ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದಾರೆ.
ನವೆಂಬರ್ 5ರಂದು ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ “ದಿ ಎಚ್-ಫೈಲ್ಸ್” ಎಂಬ ಹೆಸರಿನಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದರು. ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 25 ಲಕ್ಷ ನಕಲಿ ಮತದಾರರ ಹೆಸರನ್ನು ಸೇರಿಸಿ ಮತಗಳ್ಳತನ ನಡೆಸಿದೆ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದ್ದರು.
“ಸೀಮಾ, ಸ್ವೀಟಿ, ಸರಸ್ವತಿ” ಮುಂತಾದ ಹೆಸರುಗಳಲ್ಲಿ 'ಬ್ರೆಝಿಲ್ ಮಾಡೆಲ್’ನ ಚಿತ್ರವನ್ನು 10 ಬೂತ್ ಗಳಲ್ಲಿ 22 ಬಾರಿ ಬಳಸಲಾಗಿರುವುದನ್ನು ಮತಗಳ್ಳತನದ ಉದಾಹರಣೆಯಾಗಿ ರಾಹುಲ್ ಗಾಂಧಿ ತೋರಿಸಿದ್ದರು. ಇದೊಂದು ವ್ಯವಸ್ಥಿತ ಯೋಜನೆ ಎಂದು ರಾಹುಲ್ ಗಾಂಧಿ ಹೇಳಿದ್ದರು.







