2.1ಕ್ಕೆ ಇಳಿದ ಗ್ರಾಮೀಣ ಜನನ ದರ; 2023ರ ಸಾಲಿನ ‘ಸ್ಯಾಂಪಲ್ ರಿಜಿಸ್ಟ್ರೇಶನ್ ಸಿಸ್ಟಮ್’ ವರದಿ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ, ಸೆ. 4: ಗ್ರಾಮೀಣ ಭಾರತದ ಜನನ ದರವು ಮೊದಲ ಬಾರಿಗೆ ಪ್ರತಿ ಮಹಿಳೆಗೆ 2.1ರ ನಿರ್ಣಾಯಕ ಮಟ್ಟಕ್ಕೆ ಇಳಿದಿದೆ ಎಂದು ಬುಧವಾರ ಬಿಡುಗಡೆಗೊಂಡಿರುವ ಸರಕಾರದ ನೂತನ ಅಂಕಿಅಂಶಗಳು ತಿಳಿಸಿವೆ.
2.1ರ ಜನನ ದರವು ನಿರ್ಣಾಯಕವಾಗಿದ್ದು, ಮರಣಗಳನ್ನು ಕಳೆದು ಸ್ಥಿರ ಜನಸಂಖ್ಯಾ ಮಟ್ಟವನ್ನು ಕಾಯ್ದುಕೊಂಡು ಬರಲು ಅಗತ್ಯವಾಗಿದೆ.
ಅದೇ ವೇಳೆ, ದೇಶದ ಒಟ್ಟಾರೆ (ಗ್ರಾಮೀಣ ಮತ್ತು ನಗರ) ಜನನ ದರವು ಮೊದಲ ಬಾರಿಗೆ 2ರಿಂದ ಕೆಳಗಿಳಿದು 1.9ನ್ನು ತಲುಪಿದೆ.
ಅದೂ ಅಲ್ಲದೆ, ದೇಶದ ಮರಣ ದರವು ಕೊರೋನವೈರಸ್ ಸಾಂಕ್ರಾಮಿಕದ ಮೊದಲು ಇದ್ದ ಮಟ್ಟಕ್ಕಿಂತ ಹೆಚ್ಚಾಗಿಯೇ ಮುಂದುವರಿದಿದೆ ಎಂದು 2023ರ ಸಾಲಿನ ‘ಸ್ಯಾಂಪಲ್ ರಿಜಿಸ್ಟ್ರೇಶನ್ ಸಿಸ್ಟಮ್’ನ ವರದಿ ಹೇಳಿದೆ.
ಜನನ ದರ ಇಳಿಕೆಯು ಈಗ ಗ್ರಾಮೀಣ ಭಾರತವನ್ನು ಜಾಗತಿಕ ಜನಸಂಖ್ಯಾ ಪ್ರವೃತ್ತಿಯ ಸನಿಹಕ್ಕೆ ತಂದಿದೆ. ಜನನ ದರವು ಇದೇ ಮಟ್ಟವನ್ನು ಕಾಯ್ದುಕೊಂಡರೆ, ಗ್ರಾಮೀಣ ಜನಸಂಖ್ಯೆಯು ಹೆಚ್ಚುವುದರ ಬದಲು ಹಾಲಿ ಮಟ್ಟದಲ್ಲೇ ಸ್ಥಿರಗೊಳ್ಳುತ್ತದೆ.
ಗ್ರಾಮೀಣ ಜನನ ದರವು 2020ರಿಂದ 2022ರವರೆಗಿನ ಅವಧಿಯಲ್ಲಿ 2.2ರಲ್ಲಿ ಸ್ಥಗಿತವಾಗಿತ್ತು. ಬಳಿಕ ಅದು 2023ರಲ್ಲಿ ಸರಿದೂಗಿಸುವ ಮಟ್ಟ 2.1ಕ್ಕೆ ಇಳಿದಿದೆ. ನಗರ ಪ್ರದೇಶಗಳಲ್ಲಿ, ಜನನ ದರವು 20 ವರ್ಷಗಳಿಗಿಂತಲೂ ಹಿಂದೆಯೇ 2.1ಕ್ಕಿಂತ ಕೆಳಗೆ ಇಳಿದಿತ್ತು. ಈಗ 2023ರಲ್ಲಿ ಅದು 1.5ಕ್ಕೆ ಇಳಿದಿದೆ. ಅದು 2020ರಿಂದ 2022ರವರೆಗೆ 1.6ರಲ್ಲಿ ಸ್ಥಗಿತಗೊಂಡಿತ್ತು.
ದೇಶದಲ್ಲಿ ಮುಂದುವರಿಯುತ್ತಿರುವ ಹೆಚ್ಚಿನ ಮರಣ ದರದ ನಡುವೆಯೇ ಜನನ ದರದಲ್ಲಿ ಕುಸಿತವಾಗಿದೆ. ಮರಣ ದರವು ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ಇಳಿಯುವಲ್ಲಿ ಈಗಲೂ ವಿಫಲವಾಗಿದೆ. 2023ರಲ್ಲಿ ಭಾರತದ ಮರಣ ದರವು ಪ್ರತಿ ಸಾವಿರ ಜನರಿಗೆ 6.4 ಆಗಿತ್ತು. ಅದು 2022ರಲ್ಲಿ ಇದ್ದ ಪ್ರಮಾಣ 6.8ಕ್ಕಿಂತ ಕಡಿಮೆಯಾಗಿದ್ದರೂ, 2019 ಮತ್ತು 2020ರಲ್ಲಿ ಇದ್ದ 6ಕ್ಕಿಂತ ಹೆಚ್ಚಾಗಿದೆ.







