ನಾಲ್ವರು ಮಹಾರಾಷ್ಟ್ರ ಸಚಿವರು ‘ಹನಿ ಟ್ರ್ಯಾಪ್’ ಬಲೆಗೆ: ಸಂಜಯ್ ರಾವತ್ ಆರೋಪ
ಸಾಕ್ಷ್ಯ ಕೇಳಿದ ಬಿಜೆಪಿ

ಸಂಜಯ್ ರಾವತ್ | PTI
ಮುಂಬೈ: ನಾಲ್ವರು ಮಹಾರಾಷ್ಟ್ರ ಸಚಿವರು ಹಾಗೂ ಹಲವಾರು ಸರಕಾರಿ ಅಧಿಕಾರಿಗಳು ‘ಹನಿ ಟ್ರ್ಯಾಪ್’ ಬಲೆಗೆ ಬಿದ್ದಿದ್ದಾರೆ ಎಂದು ಸೋಮವಾರ ಶಿವಸೇನೆ (ಉದ್ಧವ್ ಬಣ) ನಾಯಕ S ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪಕ್ಕೆ ತಿರುಗೇಟು ನೀಡಿರುವ ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬವಾಂಕುಲೆ, ಈ ಕುರಿತ ಸಾಕ್ಷ್ಯವನ್ನು ಸಾರ್ವಜನಿಕಗೊಳಿಸುವಂತೆ ಅವರಿಗೆ ಸವಾಲು ಹಾಕಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಂಜಯ್ ರಾವತ್, “ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಲು ಅವಿಭಜಿತ ಶಿವಸೇನೆಯಿಂದ ಪಕ್ಷಾಂತರ ಮಾಡಿದ್ದ ನಾಲ್ವರು ಸಂಸದರು ‘ಹನಿ ಟ್ರ್ಯಾಪ್’ಗೀಡಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಅವರು ಈ ಪೋಸ್ಟ್ ನಲ್ಲಿ ಯಾರದೇ ಹೆಸರನ್ನು ಉಲ್ಲೇಖಿಸಿಲ್ಲ. ಬದಲಿಗೆ, “ನಾಲ್ವರು ಸಚಿವರು ಹಾಗೂ ಹಲವಾರು ಸರಕಾರಿ ಅಧಿಕಾರಿಗಳು ‘ಹನಿ ಟ್ರ್ಯಾಪ್’ ಬಲೆಗೆ ಬಿದ್ದಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ.
ಇದಕ್ಕೂ ಮುನ್ನ, ರಾಜ್ಯದಲ್ಲಿ ಹನಿ ಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲ್ ಮಾಡಿರುವ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ಕಳೆದ ವಾರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿಧಾನಸಭೆಗೆ ತಿಳಿಸಿದ್ದರು. ಆದರೆ, ದೇವೇಂದ್ರ ಫಡ್ನವಿಸ್ ಸದನದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಸೋಮವಾರ ಆರೋಪಿಸಿರುವ ಸಂಜಯ್ ರಾವತ್, ‘ಹನಿ ಟ್ರ್ಯಾಪ್ ಗೊಳಗಾಗಿರುವ ನಾಲ್ವರು ಸಚಿವರು ನನಗೆ ತಿಳಿದಿದ್ದಾರೆ” ಎಂದು ಹೇಳಿದ್ದಾರೆ.
“ಅವಿಭಜಿತ ಶಿವಸೇನೆ ತೊರೆದ ಸಂಸದರ ಪೈಕಿ ನಾಲ್ವರನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ಹಾಗೂ ಅವರ ಮೇಲೆ ಒತ್ತಡ ಹೇರಲಾಗಿದೆ. ಬಳಿಕ, ಬಿಜೆಪಿಯೊಂದಿಗೆ ಕೈಜೋಡಿಸಿದ ನಂತರ, ಅವರನ್ನೆಲ್ಲ ಆರೋಪಮುಕ್ತರನ್ನಾಗಿಸಲಾಗಿದೆ” ಎಂದೂ ಹೊಸ ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಂಜಯ್ ರಾವತ್ ಆರೋಪಿಸಿದ್ದಾರೆ.
ಕಳೆದ ವಾರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಕೂಡಾ, ಥಾಣೆ, ನಾಶಿಕ್ ಹಾಗೂ ಮುಂಬೈನಲ್ಲಿನ ಸಚಿವಾಲಯದ ರಾಜ್ಯ ಅಧಿಕಾರಿಗಳನ್ನು ‘ಹನಿ ಟ್ರ್ಯಾಪ್’ ಜಾಲ ಗುರಿಯಾಗಿಸಿಕೊಂಡಿದೆ ಎಂಬ ಆರೋಪಗಳ ಕುರಿತು ರಾಜ್ಯ ಸರಕಾರ ಅಧಿಕೃತ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದ್ದರು.







