‘ನಾನು ಅಮಾಯಕ, ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ’ : ದೋಷಿ ಸಂಜಯ್ ರಾಯ್

ಸಂಜಯ್ ರಾಯ್ | PC : PTI
ಕೋಲ್ಕತಾ : ನಗರದ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ದೋಷಿ ಸಂಜಯ್ ರಾಯ್ಗೆ ಸೋಮವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸುವ ಮುನ್ನ, ಆತನನ್ನು ಭಾರೀ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆತರಲಾಯಿತು. ಶಿಕ್ಷೆಯನ್ನು ಘೋಷಿಸುವ ಮೊದಲು, ನ್ಯಾಯಾಲಯವು ಮಧ್ಯಾಹ್ನ ಸುಮಾರು 12:30ಕ್ಕೆ ದೋಷಿಯ ಹೇಳಿಕೆಯನ್ನು ಆಲಿಸಿತು.
‘‘ನಿಮ್ಮ ವಿರುದ್ಧದ ಯಾವ ಆರೋಪಗಳಲ್ಲಿ ನೀವು ದೋಷಿಯಾಗಿದ್ದೀರಿ ಮತ್ತು ನಿಮ್ಮ ವಿರುದ್ಧದ ಯಾವ ಆರೋಪಗಳು ಸಾಬೀತಾಗಿವೆ ಎನ್ನುವುದನ್ನು ನಾನು ಹಿಂದಿನ ವಿಚಾರಣೆಯ ವೇಳೆ ನಿಮಗೆ ತಿಳಿಸಿದ್ದೇನೆ’’ ಎಂದು ನ್ಯಾಯಾಧೀಶರು ಆರೋಪಿಯನ್ನು ಉದ್ದೇಶಿಸಿ ಹೇಳಿದರು.
ತನ್ನ ವಿರುದ್ಧದ ಆರೋಪಗಳ ಬಗ್ಗೆ ಕೇಳಿದಾಗ, ನಾನು ಏನೂ ಮಾಡಿಲ್ಲ ಮತ್ತು ನನ್ನನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿ ಹೇಳಿದನು.
‘‘ನಾನೇನೂ ಮಾಡಿಲ್ಲ, ಅತ್ಯಾಚಾರವನ್ನೂ ಮಾಡಿಲ್ಲ, ಕೊಲೆಯನ್ನೂ ಮಾಡಿಲ್ಲ. ನನ್ನನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ನಾನು ಅಮಾಯಕ. ನನಗೆ ಹಿಂಸೆ ನೀಡಲಾಗಿದೆ ಎಂದು ನಾನು ಈಗಾಗಲೇ ನಿಮಗೆ ಹೇಳಿದ್ದೇನೆ. ಅವರಿಗೆ ಬೇಕಾದ ಹಾಗೆ ನನ್ನಿಂದ ಸಹಿ ಹಾಕಿಸಿಕೊಂಡಿದ್ದಾರೆ’’ ಎಂದು ಸಂಜಯ್ ರಾಯ್ ಹೇಳಿದನು.
ಶಿಕ್ಷೆಯ ಪ್ರಮಾಣ ಘೋಷಣೆಯ ವೇಳೆ ಮಾತನಾಡಿದ ಆರೋಪಿ ಪರ ವಕೀಲರು, ‘‘ಈ ಪ್ರಕರಣವು ಅಪರೂಪದಲ್ಲೇ ಅಪರೂಪ ವಿಭಾಗದ ವ್ಯಾಪ್ತಿಯಲ್ಲಿ ಬಂದರೂ, ಆರೋಪಿಯ ಸುಧಾರಣೆಗೆ ಅವಕಾಶ ಇರಬೇಕು. ದೋಷಿಯು ಸುಧಾರಣೆ ಮತ್ತು ಪುನರ್ವಸತಿಗೆ ಯಾಕೆ ಅರ್ಹನಲ್ಲ ಎನ್ನುವುದನ್ನು ನ್ಯಾಯಾಲಯವು ಹೇಳಬೇಕು. ಆರೋಪಿಯು ಸುಧಾರಣೆಗೆ ಯಾಕೆ ಅರ್ಹನಲ್ಲ ಮತ್ತು ಅವನನ್ನು ಯಾಕೆ ಸಮಾಜದಿಂದ ಸಂಪೂರ್ಣವಾಗಿ ತೆಗೆಯಬೇಕು ಎನ್ನುವುದಕ್ಕೆ ಸರಕಾರಿ ವಕೀಲರು ಕಾರಣಗಳನ್ನು ನೀಡಬೇಕು ಮತ್ತು ಅದಕ್ಕೆ ಪುರಾವೆಗಳನ್ನು ಒದಗಿಸಬೇಕು’’ ಎಂದು ಹೇಳಿದರು.
ಆರೋಪಿ ಸಂಜಯ್ ರಾಯ್ಗೆ ಮರಣ ದಂಡನೆ ವಿಧಿಸುವಂತೆ ಪ್ರಕರಣದ ತನಿಖೆ ನಡೆಸಿರುವ ಸಿಬಿಐ ನ್ಯಾಯಾಲಯವನ್ನು ಕೋರಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ತೆಯ ಕುಟುಂಬದ ವಕೀಲರು, ‘‘ದೋಷಿಗೆ ಗರಿಷ್ಠ ಶಿಕ್ಷೆಯಾಗಿ ಮರಣ ದಂಡನೆ ವಿಧಿಸಬೇಕು’’ ಎಂದು ಮನವಿ ಮಾಡಿದರು.
ವೈದ್ಯೆಯ ಮೃತದೇಹವು ಆಗಸ್ಟ್ 9ರಂದು ಆಸ್ಪತ್ರೆಯ ಸೆಮಿನಾರ್ ಕೋಣೆಯಲ್ಲಿ ಪತ್ತೆಯಾಗಿತ್ತು. ಈ ಅತ್ಯಾಚಾರ-ಕೊಲೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆದಿತ್ತು. ಘಟನೆ ನಡೆದ ಒಂದು ದಿನದ ಬಳಿಕ ರಾಯ್ನನ್ನು ಬಂಧಿಸಲಾಗಿತ್ತು. ಬಳಿಕ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.