ಕೇನ್ಸ್ ನಲ್ಲಿ ಪಿಯರೆ ಆಂಜೆನಿಯುಕ್ಸ್ ಟ್ರಿಬ್ಯೂಟ್ ಪ್ರಶಸ್ತಿ ಪಡೆದ ಮೊದಲ ಏಶ್ಯನ್ ಸಂತೋಷ್ ಶಿವನ್

Photo : x/santoshsivan
ಹೊಸದಿಲ್ಲಿ: ಖ್ಯಾತ ಛಾಯಾಚಿತ್ರಗ್ರಾಹಕ ಸಂತೋಷ್ ಶಿವನ್ ಅವರು 2024ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಪಿಯರೆ ಆಂಜೆನಿಯುಕ್ಸ್ ಟ್ರಿಬ್ಯೂಟ್ ಪ್ರಶಸ್ತಿಗೆ ಭಾಜನರಾದ ಮೊದಲ ಏಶ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶಿವನ್ ಅವರ ‘ವೃತ್ತಿ ಜೀವನ ಮತ್ತು ಕೆಲಸದ ಅಸಾಧಾರಣ ಗುಣಮಟ್ಟ’ವನ್ನು ಈ ಗೌರವವನ್ನು ಅವರಿಗೆ ನೀಡಲಾಗಿದೆ ಎಂದು ಅಧಿಕೃತ ಸಂವಹನವು ತಿಳಿಸಿದೆ.
ಕೇನ್ಸ್ ನಲ್ಲಿ ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರು ಶಿವನ್ಗೆ ಪ್ರಶಸ್ತಿಯನ್ನು ಪ್ರದಾನಿಸಿದರು.
ಶಿವನ್ ರನ್ನು ಅಭಿನಂದಿಸಿರುವ ಮಲಯಾಳಂ ಸೂಪರ್ ಸ್ಟಾರ್ ಮೋಹನಲಾಲ್ ಅವರು,‘ಕೇನ್ಸ್ ಚಲನಚಿತ್ರೋತ್ಸವ 2024ರ ಐತಿಹಾಸಿಕ ಘಳಿಗೆಯನ್ನು ವೀಕ್ಷಿಸಲು ಉತ್ಸುಕನಾಗಿದ್ದೇನೆ. ಪಿಯರೆ ಆಂಜಿನಿಯುಕ್ಸ್ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ನಮ್ಮ ಸಂತೋಷ ಶಿವನ್ಗೆ ಅಭಿನಂದನೆಗಳು ’ ಎಂದು ಹೇಳಿದ್ದಾರೆ.
ಮೋಹನಲಾಲ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ಬರೋಝ್’ನ ಛಾಯಾಚಿತ್ರಗ್ರಹಣವನ್ನು ಶಿವನ್ ನಿರ್ವಹಿಸುತ್ತಿದ್ದಾರೆ.
ಆಧುನಿಕ ಝೂಮ್ ಲೆನ್ಸ್ ಗಳ ಆವಿಷ್ಕಾರಿಗಳಲ್ಲಿ ಒಬ್ಬರಾಗಿರುವ ಪಿಯರೆ ಆಂಜಿನಿಯುಕ್ಸ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು 2013ರಿಂದ ನೀಡಲಾಗುತ್ತಿದೆ.
ಶಿವನ್ ದಿಲ್ ಸೆ,ರೋಜಾ,ಇರುವರ್ ಮತ್ತು ಕಾಲಾಪಾನಿಯಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಮಲಯಾಳಂ ಚಿತ್ರ ‘ಕಲಿಯುಗಂ’ ಮತ್ತು ಇಂಗ್ಲೀಷ್ ಚಿತ್ರ ’ಮೋಹ’ವನ್ನು ನಿರ್ದೇಶಿಸುತ್ತಿದ್ದಾರೆ.





