ಸರ್ದಾರ್ ಪಟೇಲ್ ಭಾರತದೊಂದಿಗೆ ಕಾಶ್ಮೀರ ವಿಲೀನಕ್ಕೆ ಬಯಸಿದ್ದರು, ಆದರೆ ನೆಹರೂ ಅವಕಾಶ ನೀಡಿರಲಿಲ್ಲ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ (Photo: PTI)
ಅಹ್ಮದಾಬಾದ್: ಶುಕ್ರವಾರ ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪರಂಪರೆಯನ್ನು ಮತ್ತು ಭಾರತವನ್ನು ಒಗ್ಗೂಡಿಸಲು ಅವರು ಮಾಡಿದ್ದ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ನೆನಪಿಸಿಕೊಂಡರು.
ಪಟೇಲ್ ಅವರ 150ನೇ ಜನ್ಮದಿನದ ಪ್ರಯುಕ್ತ ಗುಜರಾತಿನ ಕೇವಡಿಯಾದಲ್ಲಿ ಏಕತಾ ಪ್ರತಿಮೆಯ ಬಳಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ,ಸ್ವಾತಂತ್ರ್ಯಾನಂತರ ಸರ್ದಾರ ಪಟೇಲ್ ಅವರು 550ಕ್ಕೂ ಹೆಚ್ಚಿನ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವ ಅಸಾಧ್ಯ ಕಾರ್ಯವನ್ನು ಸಾಧಿಸಿದ್ದರು ಎಂದು ಹೇಳಿದರು. ಇಡೀ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು ಸರ್ದಾರ್ ಪಟೇಲ್ ಬಯಸಿದ್ದರು, ಆದರೆ ಜವಾಹರಲಾಲ್ ನೆಹರು ಅದಕ್ಕೆ ಅವಕಾಶ ನೀಡಿರಲಿಲ್ಲ ಎಂದು ಅವರು ಬೆಟ್ಟು ಮಾಡಿದರು.
ಕಾಂಗ್ರಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ದುರದೃಷ್ಟವಶಾತ್ ಸರ್ದಾರ್ ಪಟೇಲ್ ಅವರ ನಿಧನದ ನಂತರದ ವರ್ಷಗಳಲ್ಲಿ ಆಗಿನ ಸರಕಾರಗಳು ದೇಶದ ಸಾರ್ವಭೌಮತೆಯ ಬಗ್ಗೆ ಅದೇ ಗಂಭೀರ ಕಾಳಜಿಯನ್ನು ಹೊಂದಿರಲಿಲ್ಲ. ಒಂದೆಡೆ ಕಾಶ್ಮೀರ ವಿಷಯದಲ್ಲಿ ಮಾಡಿದ್ದ ತಪ್ಪುಗಳು,ಇನ್ನೊಂದೆಡೆ ಈಶಾನ್ಯ ಭಾರತದಲ್ಲಿ ತಲೆಯೆತ್ತುತ್ತಿದ್ದ ಸಮಸ್ಯೆಗಳು ಮತ್ತು ದೇಶಾದ್ಯಂತ ನಕ್ಸಲ್ವಾದ ಹಾಗೂ ಮಾವೋವಾದಿ ಭಯೋತ್ಪಾದನೆಯ ಹರಡುವಿಕೆ ದೇಶದ ಸಾರ್ವಭೌಮತ್ವಕ್ಕೆ ನೇರ ಸವಾಲುಗಳನ್ನು ಒಡ್ಡಿದ್ದವು. ಆದರೆ ಸರ್ದಾರ್ ಪಟೇಲ್ ಅವರ ನೀತಿಗಳನ್ನು ಅನುಸರಿಸುವ ಬದಲು ಆಗಿನ ಸರಕಾರಗಳು ದುರ್ಬಲ ನೀತಿಗಳನ್ನು ಅನುಸರಿಸಿದ್ದವು. ದೇಶವು ಹಿಂಸೆ ಮತ್ತು ರಕ್ತಪಾತದ ರೂಪದಲ್ಲಿ ಪರಿಣಾಮಗಳನ್ನು ಅನುಭವಿಸಿತ್ತು ಎಂದು ಹೇಳಿದರು.
ಕಾಂಗ್ರೆಸ್ ಸರಕಾರವು ದೇಶಕ್ಕಾಗಿ ಸರ್ದಾರ್ ಪಟೇಲ್ ಅವರ ದೃಷ್ಟಿಕೋನವನ್ನು ಮರೆತಿತ್ತು ಮತ್ತು ಪಕ್ಷವು ಯಾವಾಗಲೂ ಪಾಕಿಸ್ತಾನ ಮತ್ತು ಭೀತಿವಾದಕ್ಕೆ ತಲೆ ಬಾಗಿಸಿತ್ತು ಎಂದರು.







