ಭಾರತ-ಪಾಕ್ ಉದ್ವಿಗ್ನತೆ: ದಿಲ್ಲಿಗೆ ಸೌದಿ ಸಹಾಯಕ ವಿದೇಶಾಂಗ ಸಚಿವರ ದಿಢೀರ್ ಭೇಟಿ

Photo credit: X/@DrSJaishankar
ಹೊಸದಿಲ್ಲಿ,ಮೇ 8: ಸೌದಿ ಅರೇಬಿಯದ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ಆದಿಲ್ ಅಲ್ ಜುಬೈರ್ ಅವರು ಗುರುವಾರ ಭಾರತಕ್ಕೆ ದಿಢೀರ್ ಭೇಟಿಯನ್ನು ನೀಡಿ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಿಸುವುದಕ್ಕೆ ಆದ್ಯತೆಯೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾತುಕತೆಗಳನ್ನು ನಡೆಸಿದರು.
‘ಆಪರೇಷನ್ ಸಿಂಧೂರ’ ಬಳಿಕ ಭಾರತ ಮತ್ತು ಪಾಕ್ ನಡುವಿನ ಸಂಬಂಧಗಳು ಇನ್ನಷ್ಟು ಹದಗೆಟ್ಟಿರುವ ನಡುವೆಯೇ ಅಲ್ಜುಬೈರ್ ಭಾರತಕ್ಕೆ ಭೇಟಿ ನೀಡಿದ್ದಾರೆ.
‘ಇಂದು ಬೆಳಿಗ್ಗೆ ಸೌದಿ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ಮಾತುಕತೆ ನಡೆಸಿ ಭಯೋತ್ಪಾದನೆಯನ್ನು ದೃಢವಾಗಿ ಎದುರಿಸುವ ಕುರಿತು ಭಾರತದ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದೇನೆ ’ ಎಂದು ಜೈಶಂಕರ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ನಿಗದಿತ ಭೇಟಿಗಾಗಿ ನಿನ್ನೆ ಮಧ್ಯರಾತ್ರಿ ದಿಲ್ಲಿಗೆ ಬಂದಿಳಿದಿದ್ದಾರೆ.
ಅರಘ್ಚಿ ಅವರು ಜೈಶಂಕರ್ ಅವರೊಂದಿಗೆ ವ್ಯಾಪಕ ಮಾತುಕತೆಗಳನ್ನು ನಡೆಸಿದರು. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿಯಾಗಿದ್ದಾರೆ.





