ಸಾವರ್ಕರ್ ಗೆ ಸೂಕ್ತ ಗೌರವ ಸಿಕ್ಕಿಲ್ಲ : ಅಮಿತ್ ಶಾ

ಅಮಿತ್ ಶಾ | Photo Credit : PTI
ಹೊಸದಿಲ್ಲಿ: ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ನಡೆಸಿದ ಪ್ರಯತ್ನಕ್ಕೆ ಸಂಬಂಧಿಸಿದಂತೆ ವಿ.ಡಿ.ಸಾವರ್ಕರ್ ಅವರಿಗೆ ಅರ್ಹವಾಗಿ ಸಲ್ಲಬೇಕಿದ್ದ ಗೌರವ ಎಂದೂ ದೊರಕಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಶ್ರೀವಿಜಯಪುರಂನಲ್ಲಿ ಹಮ್ಮಿಕೊಂಡಿದ್ದ ಸಾವರ್ಕರ್ ಅವರ ಸಾಗರ ಪ್ರಾಣ ತಲಮಾಲಾ ಗೀತೆಯ 115ನೇ ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿರೋಧಕ್ಕೂ ಹೆದರದೇ ಹಿಂದೂ ಸಮಾಜದೊಳಗೇ ಇದ್ದ ಅನಿಷ್ಟಗಳ ವಿರುದ್ಧ ಅವರು ಹೋರಾಡಿದರು ಎಂದು ಬಣ್ಣಿಸಿದರು. ಸಾವರ್ಕರ್ ಪ್ರತಿಮೆಯನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು.
"ವೀರಸಾವರ್ಕರ್ ಅವರ ನೈಜ ಗಾತ್ರದ ಪುತ್ಥಳಿ ಅನಾವರಣಗೊಳಿಸಿದ ಈ ದಿನ ಮಹತ್ವದ ದಿನ. ಅದು ಕೂಡಾ ಸರಸಂಘಚಾಲಕರು ಸಾವರ್ಕರ್ ಸಿದ್ಧಾಂತಗಳನ್ನು ನೈಜವಾಗಿ ಮುನ್ನಡೆಸುತ್ತಿದ್ದಾರೆ" ಎಂದು ಶಾ ಹೇಳಿದರು.
ಸಾವರ್ಕರ್ ಅಸ್ಪೃಶ್ಯತೆ ವಿರುದ್ಧ ಹೋರಾಡಿದರು ಮತ್ತು ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಸ್ವಾತಂತ್ರ್ಯಕ್ಕೆ ಮುನ್ನ, ಸೆಲ್ಯುಲರ್ ಜೈಲಿಗೆ ಕಳುಹಿಸಲ್ಪಟ್ಟವರು ಮತ್ತೆ ಬರುವುದಿಲ್ಲ ಎಂದು ಕುಟುಂಬಗಳು ನಂಬಿದ್ದವು. ಆದರೆ ಈ ತಾಣ ಇಂದು ರಾಷ್ಟ್ರೀಯ ಯಾತ್ರಾಕ್ಷೇತ್ರವಾಗಿದೆ. ಏಕೆಂದರೆ ಸಾವರ್ಕರ್ ತಮ್ಮ ಶಿಕ್ಷೆಯನ್ನು ಅಲ್ಲಿ ಅನುಭವಿಸಿದರು. ಸಾವರ್ಕರ್ ದೇಶಪ್ರೇಮಿ; ಸಮಾಜ ಸುಧಾರಕ. 600 ಹೊಸ ಶಬ್ದಗಳನ್ನು ನೀಡಿ ಭಾಷೆಯನ್ನು ಸಮೃದ್ಧಗೊಳಿಸಿದ ಕವಿ ಹಾಗೂ ಲೇಖಕ. ಅವರು ಭಾರತದ ಭವಿಷ್ಯ ಹಾಗೂ ಸ್ವಾತಂತ್ರ್ಯದ ಬಗ್ಗೆ ಅಚಲ ನಂಬಿಕೆ ಹೊಂದಿದ್ದರು ಎಂದು ಶಾ ವಿವರಿಸಿದರು.







