ರಿಲಯನ್ಸ್ ಕಮ್ಯುನಿಕೇಷನ್ಸ್, ಪ್ರವರ್ತಕ ಅನಿಲ್ ಅಂಬಾನಿಯನ್ನು ‘ವಂಚನೆ’ ಎಂದು ವರ್ಗೀಕರಿಸಿದ ಎಸ್ಬಿಐ

ಅನಿಲ್ ಅಂಬಾನಿ | PTI
ಹೊಸದಿಲ್ಲಿ: ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್ಕಾಮ್) ಮತ್ತು ಅದರ ಪ್ರವರ್ತಕ ನಿರ್ದೇಶಕ ಅನಿಲ್ ಅಂಬಾನಿಯನ್ನು ‘ವಂಚನೆ’ ಎಂದು ವರ್ಗೀಕರಿಸಿರುವ ಎಸ್ಬಿಐ, ಸಿಬಿಐಗೆ ದೂರು ಸಲ್ಲಿಸುವ ಪ್ರಕ್ರಿಯೆಯಲ್ಲಿದೆ ಎಂದು ಸಹಾಯಕ ವಿತ್ತಸಚಿವ ಪಂಕಜ್ ಚೌಧರಿಯವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ವಂಚನೆ ಅಪಾಯ ನಿರ್ವಹಣೆ ಕುರಿತು ಆರ್ಬಿಐ ನಿರ್ದೇಶನಗಳು ಹಾಗೂ ವಂಚನೆಗಳ ವರ್ಗೀಕರಣ, ವರದಿ ಮತ್ತು ನಿರ್ವಹಣೆ ಕುರಿತು ಬ್ಯಾಂಕಿನ ಆಡಳಿತ ಮಂಡಳಿಯಿಂದ ಅನುಮೋದಿತ ನೀತಿಗೆ ಅನುಗುಣವಾಗಿ ಜೂ.13,2025ರಂದು ಈ ವರ್ಗೀಕರಣವನ್ನು ಮಾಡಲಾಗಿದೆ. ಎಸ್ಬಿಐ ವಂಚನೆ ವರ್ಗೀಕರಣವನ್ನು ಜೂ.24,2025ರಂದು ಆರ್ಬಿಐಗೆ ವರದಿ ಮಾಡಿದ್ದು, ಸಿಬಿಐಗೆ ದೂರು ಸಲ್ಲಿಸಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಜು.1,2025ರಂದು ಬಾಂಬೆ ಶೇರು ವಿನಿಮಯ ಕೇಂದ್ರ(ಬಿಎಸ್ಇ)ಕ್ಕೆ ವರ್ಗೀಕರಣ ಕುರಿತು ಮಾಹಿತಿಯನ್ನು ಸಲ್ಲಿಸಿತ್ತು.
ರಿಲಯನ್ಸ್ ಕಮ್ಯುನಿಕೇಷನ್ಸ್ ಎಸ್ಬಿಐಗೆ ಪಾವತಿಸಬೇಕಿರುವ ಸಾಲ ಬಾಕಿಯು ಆ.26,2016ರಿಂದ ಫಂಡ್ ಆಧಾರಿತ ಬಡ್ಡಿ ಮತ್ತು ವೆಚ್ಚ ಸಹಿತ 2,227.64 ಕೋಟಿ ರೂ. ಮತ್ತು ನಾನ್-ಫಂಡ್ ಆಧಾರಿತ 786.52 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿಯನ್ನು ಒಳಗೊಂಡಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಪ್ರಸ್ತುತ ದಿವಾಳಿತನ ಪ್ರಕ್ರಿಯೆಯಲ್ಲಿದೆ.
ಎಸ್ಬಿಐ ಇನಸಾಲ್ವೆನ್ಸಿ ಆ್ಯಂಡ್ ಬ್ಯಾಂಕ್ರಪ್ಟ್ಸಿಕೋಡ್ (ಐಬಿಸಿ)ನಡಿ ಅನಿಲ ಅಂಬಾನಿ ವಿರುದ್ಧ ವೈಯಕ್ತಿಕ ದಿವಾಳಿತನ ನಿರ್ಣಯ ಪ್ರಕ್ರಿಯೆಯನ್ನೂ ಆರಂಭಿಸಿದ್ದು, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣವು ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ.







