ಕೇರಳದ ನರ್ಸ್‌ಗೆ ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ : ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಹೊಸದಿಲ್ಲಿ: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ಮಧ್ಯಪ್ರವೇಶಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
2017ರಲ್ಲಿ ಯೆಮೆನ್ ಪ್ರಜೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಿಮಿಷಾ ಅವರನ್ನು ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಯೆಮೆನ್‌ನ ಜೈಲು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಗುರುವಾರ, ಹಿರಿಯ ವಕೀಲ ಆರ್. ಬಸಂತ್ ಅವರು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೊಯಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠದ ಮುಂದೆ ಈ ವಿಷಯವನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ಜುಲೈ 14ಕ್ಕೆ ಅರ್ಜಿ ವಿಚಾರಣೆ ನಡೆಸಲು ನ್ಯಾಯಾಲಯ ಸಮ್ಮತಿಸಿದೆ.
ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ಮಧ್ಯಪ್ರವೇಶಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಬೇಕೆಂದು ʼಸೇವ್ ನಿಮಿಷಾ ಪ್ರಿಯಾ ಆಕ್ಷನ್ ಕೌನ್ಸಿಲ್ʼ ಎಂಬ ಸಂಘಟನೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ನಿಮಿಷಾ ಪ್ರಿಯಾ ಅವರು ತಮ್ಮ ವ್ಯವಹಾರ ಪಾಲುದಾರರಾದ ತಲಾಲ್ ಅಬ್ದೋ ಮಹ್ದಿ ಅವರ ಕೊಲೆಗೆ ಸಂಬಂಧಿಸಿ ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ. 2017ರ ಜುಲೈನಲ್ಲಿ ನಿಮಿಷಾ ಪ್ರಿಯಾಳನ್ನು ಬಂಧಿಸಲಾಗಿತ್ತು. 2020ರಲ್ಲಿ ಯೆಮನ್ ನ್ಯಾಯಾಲಯ ಆಕೆಗೆ ಗಲ್ಲು ಶಿಕ್ಷೆ ವಿಧಿಸಿತ್ತು.







