ರಾಜ್ಯಸಭೆಯಿಂದ ಪತ್ರ ಬಂದ ಬಳಿಕ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧದ ತನಿಖೆ ಕೈಬಿಟ್ಟ ಸುಪ್ರೀಂ ಕೋರ್ಟ್: ವರದಿ
ವಿಎಚ್ಪಿ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ನ್ಯಾ. ಶೇಖರ್ ಕುಮಾರ್ ಯಾದವ್

ಶೇಖರ್ ಕುಮಾರ್ ಯಾದವ್ , ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ವಿಎಚ್ಪಿ ಕಾರ್ಯಕ್ರಮವೊಂದರಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ನೀಡಿರುವ ವಿವಾದಾತ್ಮಕ ಹೇಳಿಕೆಗಳ ಕುರಿತು ಆಂತರಿಕ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸಿದ್ಧತೆ ನಡೆಸಿತ್ತು. ಆದರೆ ರಾಜ್ಯಸಭಾ ಕಾರ್ಯದರ್ಶಿಯಿಂದ ಈ ಬಗ್ಗೆ ಪತ್ರ ಬಂದ ನಂತರ ಯೋಜನೆಯನ್ನು ಕೈಬಿಡಲಾಯಿತು ಎಂದು ಮೂಲಗಳು ತಿಳಿಸಿರುವ ಬಗ್ಗೆ hindustantimes ವರದಿ ಮಾಡಿದೆ.
ಮಾರ್ಚ್ನಲ್ಲಿ ರಾಜ್ಯಸಭಾ ಕಾರ್ಯದರ್ಶಿಯವರು ತಮ್ಮ ಪತ್ರದಲ್ಲಿ ಇಂತಹ ಯಾವುದೇ ಪ್ರಕ್ರಿಯೆಗೆ ಅವಕಾಶ ನೀಡುವ ಅಧಿಕಾರ ರಾಜ್ಯಸಭಾ ಸ್ಪೀಕರ್, ಸಂಸತ್ತು ಮತ್ತು ರಾಷ್ಟ್ರಪತಿಗಳಿಗೆ ಮಾತ್ರ ಇದೆ ಎಂದು ಹೇಳಿದ ನಂತರ ಕ್ರಮವನ್ನು ಕೈಬಿಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಂದ ವರದಿ ಪಡೆದ ಬಳಿಕ ನ್ಯಾಯಮೂರ್ತಿ ಯಾದವ್ ಅವರ ನಡವಳಿಕೆಯನ್ನು ಪರಿಶೀಲಿಸುವ ಅಗತ್ಯವಿದೆಯೇ ಎಂದು ನಿರ್ಣಯಿಸಲು ಭಾರತದ ಮುಖ್ಯ ನ್ಯಾಯಾಧೀಶರಾದ ಸಂಜೀವ್ ಖನ್ನಾ ಅವರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು. ಆದರೆ ಆ ಬಳಿಕ ಅದನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.
2024ರ ಡಿಸೆಂಬರ್ 8ರಂದು ಪ್ರಯಾಗ್ರಾಜ್ನಲ್ಲಿ ನಡೆದ ವಿಎಚ್ಪಿ ಕಾರ್ಯಕ್ರಮದಲ್ಲಿ ಶೇಖರ್ ಕುಮಾರ್ ಯಾದವ್ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ಮತ್ತು ಖಂಡನೆ ವ್ಯಕ್ತವಾಗಿತ್ತು.