ಉದ್ಧವ್ ಠಾಕ್ರೆ ಶಿವಸೇನೆ ಬಣದ ಚಿಹ್ನೆ ವಿವಾದ: ಜ. 21ಕ್ಕೆ ಅಂತಿಮ ವಿಚಾರಣೆಯನ್ನು ನಿಗದಿಗೊಳಿಸಿದ ಸುಪ್ರೀಂ ಕೋರ್ಟ್

ಉದ್ಧವ್ ಠಾಕ್ರೆ | Photo Credit : PTI
ಹೊಸದಿಲ್ಲಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣಕ್ಕೆ ಚುನಾವಣಾ ಆಯೋಗವು ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಮಂಜೂರು ಮಾಡಿರುವ ಕ್ರಮವನ್ನು ಪ್ರಶ್ನಿೃಸಿ ಶಿವಸೇನೆ (ಉದ್ಧವ್ ಬಣ) ಸಲ್ಲಿಸಿರುವ ಅರ್ಜಿಯ ಅಂತಿಮ ವಿಚಾರಣೆಯ ದಿನಾಂಕವನ್ನು ಸುಪ್ರೀಂ ಕೋರ್ಟ್ ಜನವರಿ 21, 2026ಕ್ಕೆ ನಿಗದಿಗೊಳಿಸಿದೆ.
ನ್ಯಾ. ಸೂರ್ಯಕಾಂತ್ ಮತ್ತು ಜೋಯ್ ಮಲ್ಯ ಬಾಗ್ಚಿ ನೇತೃತ್ವದ ನ್ಯಾಯಪೀಠವು ಶಿವಸೇನೆ ಚಿಹ್ನೆಗೆ ಸಂಬಂಧಿಸಿದ ವಿವಾದದ ಕುರಿತು ಜನವರಿ 21ರಂದು ವಾದ-ಪ್ರತಿವಾದಗಳನ್ನು ಆಲಿಸಲಿದೆ. ಜನವರಿ 22ರಂದು ಇದೇ ನ್ಯಾಯಪೀಠ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಚಿಹ್ನೆ ಕುರಿತ ಇದೇ ಬಗೆಯ ವಾದ-ಪ್ರತಿವಾದಗಳನ್ನು ಆಲಿಸಲಿದೆ. ಈ ಎರಡೂ ಪ್ರಕರಣಗಳಲ್ಲಿ ಹಲವು ಅತಿಕ್ರಮಣದ ವಿಷಯಗಳು ಅಡಗಿವೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಪ್ರತಿ ರಾಜಕೀಯ ಪಕ್ಷಗಳ ಬಣದ ವಾದ-ಪ್ರತಿವಾದಗಳಿಗೆ ಸುಪ್ರೀಂ ಕೋರ್ಟ್ ತಲಾ ಮೂರು ಗಂಟೆಗಳ ಕಾಲಾವಕಾಶವನ್ನೂ ನಿಗದಿಗೊಳಿಸಿದೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿರುವುದರಿಂದ, ಈ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದು ಉದ್ಧವ್ ಬಣದ ಪರ ಹಾಜರಿದ್ದ ಹಿರಿಯ ವಕೀಲ ದೇವದತ್ ಕಾಮತ್ ವಾದಿಸಿದರು. ಈ ವೇಳೆ, “ಭಾರತದಲ್ಲಿನ ರಾಜಕೀಯ ಪಕ್ಷಗಳು ಸಾರ್ವತ್ರಿಕ ಚುನಾವಣೆಯಿರಲಿ ಅಥವಾ ರಾಜ್ಯ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿರಲಿ, ಅವು ಯಾವಾಗಲೂ ಚುನಾವಣಾ ಸಿದ್ಧತೆಯಲ್ಲೇ ಇರುತ್ತವೆ” ಎಂದು ನ್ಯಾ. ಸೂರ್ಯಕಾಂತ್ ಅಭಿಪ್ರಾಯ ಪಟ್ಟರು.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣದ ಪರ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಹಾಗೂ ನೀರಜ್ ಕಿಶನ್ ಕೌಲ್ ಹಾಜರಿದ್ದರು.
ಇದಕ್ಕೂ ಮುನ್ನ, ಜುಲೈ 14ರಂದು ಅರ್ಜಿ ವಿಚಾರಣೆಯ ಅಂತಿಮ ದಿನಾಂಕ ನಿಗದಿಗೊಳಿಸಿದ್ದ ನ್ಯಾಯಾಲಯ, ಅರ್ಜಿಯು ದೀರ್ಘಕಾಲದಿಂದ ಬಾಕಿಯುಳಿದಿದ್ದು, ಈ ಸಂಬಂಧ ಅನಿಶ್ಚಿತತೆ ಮುಂದುವರಿಯುವುದಕ್ಕೆ ಅವಕಾಶ ನೀಡಬಾರದು ಎಂದು ಹೇಳಿತ್ತು.







