ಬೀದಿ ನಾಯಿಗಳ ಪ್ರಕರಣದಿಂದ ನಾನು ಪ್ರಸಿದ್ಧನಾದೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಂನಾಥ್

Photo | NDTV
ಹೊಸ ದಿಲ್ಲಿ: ಬೀದಿ ನಾಯಿಗಳ ಪ್ರಕರಣದಿಂದ ನಾನು ಪ್ರಸಿದ್ಧನಾದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ನ್ಯಾ. ವಿಕ್ರಂನಾಥ್, ಕೇವಲ ಪ್ರಾಣಿಪ್ರಿಯರು ಮಾತ್ರ ನನಗೆ ಸಂದೇಶಗಳನ್ನು ಕಳಿಸುತ್ತಿಲ್ಲ; ಬದಲಿಗೆ, ನಾಯಿಗಳೂ ನನ್ನನ್ನು ಆಶೀರ್ವದಿಸುತ್ತಿವೆ ಎಂದು ಹೇಳಿದ್ದಾರೆ.
ಶನಿವಾರ ಕೇರಳದ ತಿರುವನಂತಪುರಂನಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷದ ಕುರಿತು ಆಯೋಜಿಸಿದ್ದ ಪ್ರಾಂತೀಯ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನ್ಯಾ. ವಿಕ್ರಂನಾಥ್ ಅವರನ್ನು ಬೀದಿ ನಾಯಿಗಳ ಪ್ರಕರಣದ ವಿಚಾರಣೆಯ ಅನುಭವದ ಕುರಿತು ಪ್ರಶ್ನಿಸಿದಾಗ, “ಭಾರತದ ಹೊರಗಿನ ಜನರಿಗೂ ನಾನು ಪರಿಚಿತನಾಗಿದ್ದೇನೆ ಎಂಬ ಸಂಗತಿ ತಿಳಿದು ನನಗೆ ರೋಮಾಂಚನವಾಯಿತು” ಎಂದು ಹೇಳಿದ್ದಾರೆ.
“ಇಲ್ಲಿಯವರೆಗೆ ನಾನು ಮಾಡಿರುವ ಒಂದಿಷ್ಟು ಕೆಲಸಗಳಿಗಾಗಿ ನಾನು ವಕೀಲ ವೃಂದದಲ್ಲಿ ಪರಿಚಿತನಾಗಿದ್ದೆ. ಆದರೆ, ನನ್ನನ್ನು ನಾಗರಿಕ ಸಮಾಜ, ಅದರಲ್ಲೂ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಪರಿಚಿತನನ್ನಾಗಿಸಿದ್ದಕ್ಕೆ ನಾನು ನಾಯಿಗಳಿಗೆ ಕೃತಜ್ಞನಾಗಿದ್ದೇನೆ” ಎಂದು ಹೇಳಿದ್ದಾರೆ ಎಂದು LiveLaw ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಈ ಪ್ರಕರಣವನ್ನು ನನಗೆ ಒಪ್ಪಿಸಿದ್ದಕ್ಕೆ ಮುಖ್ಯ ನ್ಯಾಯಮೂರ್ತಿಗಳಿಗೂ ಆಭಾರಿಯಾಗಿದ್ದೇನೆ. ಇತ್ತೀಚೆಗೆ ನಾವು “ಲಾ ಏಶ್ಯ ಪೋಲಾ ಸಮ್ಮಿತ್’ನಲ್ಲಿ ಒಟ್ಟಾಗಿ ಭಾಗಿಯಾಗಿದ್ದೆವು. ಅಲ್ಲಿ ವಕೀಲರ ಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಅಲ್ಲಿ ಅವರು ಬೀದಿ ನಾಯಿಗಳ ಪ್ರಕರಣದ ಕುರಿತು ನನ್ನನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಇದರಿಂದ ನನಗೆ ರೋಮಾಂಚನವಾಯಿತು. ಅಲ್ಲದೆ, ಭಾರತದ ಹೊರಗಿನವರಿಗೂ ನಾನು ಪರಿಚಿತನಾಗಿದ್ದೇನೆ. ಹೀಗಾಗಿ, ನನಗೆ ಈ ಗೌರವ ನೀಡಿದ ಅವರಿಗೆ ಆಭಾರಿಯಾಗಿದ್ದೇನೆ” ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ದಿಲ್ಲಿ ಎನ್ಸಿಆರ್ ಪ್ರದೇಶದ ಬೀದಿನಾಯಿಗಳನ್ನು ಸ್ಥಳಾಂತರಿಸುವ ಕುರಿತು ಮೊದಲಿಗೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನು ನಂತರ ನ್ಯಾ. ವಿಕ್ರಂನಾಥ್ ಮಾರ್ಪಡಿಸಿದ್ದರು. ಈ ವಿಷಯ ದೇಶಾದ್ಯಂತ ಹಾಗೂ ದೇಶದ ಹೊರಗೂ ಮುಖಪುಟದ ಸುದ್ದಿಯಾಗಿತ್ತು.







