ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ ರೂಪಿಸುವಲ್ಲಿ ವಿಳಂಬ: ಸುಪ್ರೀಂ ಕೋರ್ಟ್ ಅಸಮಾಧಾನ

Photo credit: PTI
ಹೊಸದಿಲ್ಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಿದ ಬಳಿಕವೂ ವರ್ಷಗಟ್ಟಲೆ ಆರೋಪಗಳನ್ನು ರೂಪಿಸದೇ ವಿಚಾರಣೆ ಮುಂದೂಡುತ್ತಿರುವ ಸ್ಥಿತಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣೆಯ ವಿಳಂಬದಿಂದ ನ್ಯಾಯಾಂಗದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಒಂದೇ ರೀತಿಯ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿತು.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು, “ ಚಾರ್ಜ್ ಶೀಟ್ ಸಲ್ಲಿಸಿದ ತಿಂಗಳುಗಳು, ವರ್ಷಗಳಾದರೂ ಆರೋಪಗಳನ್ನು ರೂಪಿಸಲಾಗದಿರುವ ಘಟನೆಗಳು ಹೆಚ್ಚುತ್ತಿವೆ. ಇದು ವಿಚಾರಣೆ ವಿಳಂಬವಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ,” ಎಂದು ಕಳವಳ ವ್ಯಕ್ತಪಡಿಸಿತು.
ಈ ಸಂಬಂಧ ಪೀಠವು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಲಹೆ ಕೋರಿದೆ.
“ಆರೋಪಗಳನ್ನು ರೂಪಿಸದೇ ವಿಚಾರಣೆ ಪ್ರಾರಂಭಿಸಲು ಸಾಧ್ಯವಿಲ್ಲ. ಈ ಸ್ಥಿತಿ ಬಹುತೇಕ ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿದೆ. ಹೀಗಾಗಿ ದೇಶಾದ್ಯಂತ ಕೆಲವು ನಿರ್ದೇಶನಗಳನ್ನು ನೀಡಬೇಕಾಗಿದೆ,” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
ಈ ವಿಚಾರದಲ್ಲಿ ಕೋರ್ಟ್ಗೆ ಸಹಾಯ ಮಾಡಲು ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರನ್ನು ಅಮಿಕಸ್ ಕ್ಯೂರಿ (ನ್ಯಾಯಾಲಯದ ಸಹಾಯಕ) ಆಗಿ ನೇಮಿಸಲಾಗಿದೆ. ಮುಂದಿನ ಎರಡು ವಾರಗಳ ಬಳಿಕ ಪುನಃ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಬಿಹಾರದಲ್ಲಿನ ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರೂ ಕಳೆದ ಎರಡು ವರ್ಷಗಳಿಂದ ಆರೋಪಗಳನ್ನು ರೂಪಿಸದಿರುವುದಾಗಿ ಆರೋಪಿಯ ಪರ ವಕೀಲರು ಕೋರ್ಟ್ಗೆ ತಿಳಿಸಿದ್ದರು.
ಸುಪ್ರೀಂ ಕೋರ್ಟ್ ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಉಲ್ಲೇಖಿಸಿ, ಸೆಷನ್ಸ್ ನ್ಯಾಯಾಲಯದ ವಿಚಾರಣೆಗೆ ಒಳಪಡುವ ಪ್ರಕರಣಗಳಲ್ಲಿ, ಮೊದಲ ವಿಚಾರಣೆಯ 60 ದಿನಗಳೊಳಗೆ ಆರೋಪಗಳನ್ನು ರೂಪಿಸಬೇಕೆಂದು ಸ್ಪಷ್ಟಪಡಿಸಿದೆ.
“ಆರೋಪಗಳನ್ನು ರೂಪಿಸಲು ವರ್ಷಗಟ್ಟಲೆ ಏಕೆ ಬೇಕಾಗುತ್ತದೆ? ಸಿವಿಲ್ ಪ್ರಕರಣಗಳಲ್ಲಿ ಸಮಸ್ಯೆಗಳನ್ನು ರೂಪಿಸದಿರುವುದು, ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ ರೂಪಿಸದಿರುವುದು ವಿಚಾರಣೆಯ ವಿಳಂಬಕ್ಕೆ ಕಾರಣವಾಗಿದೆ. ಈ ತೊಂದರೆಯ ಮೂಲವನ್ನು ತಿಳಿದುಕೊಂಡು ದೇಶಾದ್ಯಂತದ ನ್ಯಾಯಾಲಯಗಳಿಗೆ ನಿರ್ದೇಶನ ನೀಡಲು ನಾವು ಮುಂದಾಗುತ್ತಿದ್ದೇವೆ,” ಎಂದು ಪೀಠವು ತಿಳಿಸಿತು.
ಈ ಸಂಬಂಧ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಹಾಗೂ ಹಿರಿಯ ವಕೀಲ ಎಸ್. ನಾಗಮುತ್ತು ಅವರ ಸಹಾಯವನ್ನೂ ಕೋರ್ಟ್ ಕೋರಿದೆ.
ಬಿಹಾರ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲೂ ಆರೋಪ ರೂಪಿಸುವಲ್ಲಿ ಇದೇ ರೀತಿಯ ವಿಳಂಬವಿರುವುದಾಗಿ ವಕೀಲರು ಕೋರ್ಟ್ ಗಮನಕ್ಕೆ ತಂದರು. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ನ ಮತ್ತೊಂದು ಪೀಠವು ಮಹಾರಾಷ್ಟ್ರದಲ್ಲಿನ 600ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಗಳನ್ನು ರೂಪಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, “ ಆಘಾತಕಾರಿ ಸ್ಥಿತಿ” ಎಂದು ಟೀಕಿಸಿತ್ತು. ಕೋರ್ಟ್ ಈ ಸಂಬಂಧ ಜಿಲ್ಲಾಮಟ್ಟದ ವಿವರಗಳನ್ನು ಕೇಳಿತ್ತು.







