ಬಿಹಾರ | ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಎಡಿಆರ್
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಆದೇಶಿಸಿದ್ದ ಚುನಾವಣಾ ಆಯೋಗ!

ಸುಪ್ರೀಂ ಕೋರ್ಟ್ (Photo: PTI)
ಹೊಸದಿಲ್ಲಿ : ಬಿಹಾರದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ನಿರ್ದೇಶಿಸಿದ ಚುನಾವಣಾ ಆಯೋಗದ ಜೂನ್ 24ರ ಆದೇಶವನ್ನು ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದೆ.
ಈ ಆದೇಶವು ಸಂವಿಧಾನದ 14, 19, 21, 325 ಮತ್ತು 326 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಈ ಕ್ರಮವು ಲಕ್ಷಾಂತರ ಅರ್ಹ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಪಾಯವಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಚುನಾವಣಾ ಆಯೋಗದ ಆದೇಶವು ಸರಿಯಾದ ಸಮರ್ಥನೆ ಮತ್ತು ಪಾರದರ್ಶಕತೆಯ ಕೊರತೆಯನ್ನು ಹೊಂದಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಿಂದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತಪ್ಪಾಗಿ ಅಳಿಸಲು ಕಾರಣವಾಗಬಹುದು. ಅದರಲ್ಲೂ ವಿಶೇಷವಾಗಿ ಅಂಚಿನಲ್ಲಿರುವ ಮತ್ತು ದುರ್ಬಲ ಸಮುದಾಯಗಳ ಮತದಾರರ ಹೆಸರನ್ನು ಅಳಿಸುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಚುನಾವಣಾ ಆಯೋಗದ ಆದೇಶದ ಅನುಷ್ಠಾನವನ್ನು ತಡೆಹಿಡಿಯುವಂತೆ ಮತ್ತು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸ್ಪಷ್ಟವಾದ ತಾರ್ಕಿಕತೆಯನ್ನು ಒದಗಿಸುವಂತೆ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಎಡಿಆರ್ ತನ್ನ ಅರ್ಜಿಯಲ್ಲಿ ಕೋರಿದೆ.
ಬಿಹಾರದಲ್ಲಿ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಮಧ್ಯೆ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಆದೇಶಿಸಿತ್ತು.