ಸುಪ್ರೀಂ ಕೋರ್ಟ್ ‘ಬುಲ್ಡೋಜರ್ ನ್ಯಾಯ’ವನ್ನು ತಡೆದಿದೆ, ಕಾರ್ಯಾಂಗ ನ್ಯಾಯಾಧೀಶನಾಗಲು ಸಾಧ್ಯವಿಲ್ಲ: ಸಿಜೆಐ ಗವಾಯಿ

ಸಿಜೆಐ ಬಿ.ಆರ್.ಗವಾಯಿ (PTI)
ಹೊಸದಿಲ್ಲಿ: ಬಡವರು ಮತ್ತು ದುರ್ಬಲ ವರ್ಗಗಳಿಗೆ ರಾಜಕೀಯ,ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ತ್ವರಿತವಾಗಿ ಒದಗಿಸುವಲ್ಲಿ ಕಳೆದ 75 ವರ್ಷಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಕೊಡುಗೆಯನ್ನು ಭಾರತದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರು ಎತ್ತಿ ತೋರಿಸಿದ್ದಾರೆ. ಗುರುವಾರ ಇಟಲಿಯ ಉನ್ನತ ನ್ಯಾಯಾಧೀಶರ ಸಭೆಯಲ್ಲಿ ನ್ಯಾ.ಗವಾಯಿ ಅವರು ಸುಪ್ರೀಂ ಕೋರ್ಟ್ ಹೇಗೆ ಇತ್ತೀಚಿಗೆ ʼಬುಲ್ಡೋಜರ್ ನ್ಯಾಯʼವನ್ನು ನಿಷೇಧಿಸಿತ್ತು ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಸ್ವತಃ ನ್ಯಾಯಾಧೀಶನಾಗುವುದನ್ನು ತಡೆದಿತ್ತು ಎನ್ನುವುದನ್ನು ವಿವರಿಸಿದರು.
ಕಾರ್ಯಾಂಗವು ಕಾನೂನು ಪ್ರಕ್ರಿಯೆಯನ್ನು ತಪ್ಪಿಸಿ ಅಪರಾಧ ಪ್ರಕರಣಗಳ ಆರೋಪಿಗಳ ಮನೆಗಳನ್ನು ನಿರಂಕುಶವಾಗಿ ನೆಲಸಮಗೊಳಿಸುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಹೊರಡಿಸಿದ ತೀರ್ಪನ್ನು ಅವರು ಉಲ್ಲೇಖಿಸಿದರು.
ಮಿಲಾನ್ನ ಮೇಲ್ಮನವಿ ನ್ಯಾಯಾಲಯದಲ್ಲಿ ‘ದೇಶದಲ್ಲಿ ಸಾಮಾಜಿಕ-ಆರ್ಥಿಕ ನ್ಯಾಯವನ್ನು ವಿತರಿಸುವಲ್ಲಿ ಸಂವಿಧಾನದ ಪಾತ್ರ:ಭಾರತೀಯ ಸಂವಿಧಾನದ 75 ವರ್ಷಗಳ ಪ್ರತಿಫಲನಗಳು’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದ ನ್ಯಾ.ಗವಾಯಿ, ಕಾರ್ಯಾಂಗವು ಏಕಕಾಲದಲ್ಲಿ ನ್ಯಾಯಾಧೀಶ,ತೀರ್ಪುಗಾರ ಮತ್ತು ಅನುಷ್ಠಾನಕಾರನಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವೇಳೆ ಮನೆಯ ನಿರ್ಮಾಣವು ಸಾಮಾಜಿಕ-ಆರ್ಥಿಕ ಹಕ್ಕುಗಳನ್ನು ಒಳಗೊಂಡಿದೆ ಎಂದು ಹೇಳಿರುವ ತೀರ್ಪನ್ನು ಉಲ್ಲೇಖಿಸಿದರು.
ಓರ್ವ ಸಾಮಾನ್ಯ ನಾಗರಿಕನಿಗೆ ಮನೆಯ ನಿರ್ಮಾಣವು ಅನೇಕ ವರ್ಷಗಳ ಕಠಿಣ ಪರಿಶ್ರಮ,ಕನಸುಗಳು ಮತ್ತು ಆಕಾಂಕ್ಷೆಗಳ ಫಲಶ್ರುತಿಯಾಗಿರುತ್ತದೆ. ಮನೆ ಕೇವಲ ಆಸ್ತಿಯಲ್ಲ, ಅದು ಸ್ಥಿರತೆ, ಭದ್ರತೆ ಮತ್ತು ಭವಿಷ್ಯಕ್ಕಾಗಿ ಕುಟುಂಬ ಅಥವಾ ವ್ಯಕ್ತಿಗಳ ಸಾಮೂಹಿಕ ಆಶಯಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದ ಅವರು, ಕಳೆದ 75 ವರ್ಷಗಳಲ್ಲಿ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಒದಗಿಸುವಲ್ಲಿ ಸಂವಿಧಾನದ ಪಯಣವು ಮಹಾನ್ ಆಕಾಂಕ್ಷೆ ಮತ್ತು ಮಹತ್ವದ ಯಶಸ್ಸುಗಳ ಕಥನವಾಗಿದೆ. ಸಂವಿಧಾನವನ್ನು ಅಂಗೀಕರಿಸಿದ ತಕ್ಷಣ ಭಾರತದ ಸಂಸತ್ತು ಕೈಗೊಂಡಿದ್ದ ಆರಂಭಿಕ ಉಪಕ್ರಮಗಳಲ್ಲಿ ಭೂ ಮತ್ತು ಕೃಷಿ ಸುಧಾರಣಾ ಕಾನೂನುಗಳು ಹಾಗೂ ಹಿಂದುಳಿದ ವರ್ಗಗಳಿಗಾಗಿ ದೃಢವಾದ ನೀತಿ ಕ್ರಮಗಳು ಸೇರಿದ್ದವು. ಈ ಉಪಕ್ರಮಗಳ ಪರಿಣಾಮ ಇಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.







