ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ʼಸಮಯʼದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR) ʼಸಮಯʼದ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ಪ್ರಕ್ರಿಯೆ ಕಾನೂನುಬದ್ಧವಾಗಿದ್ದರೂ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾರ್ಯಗತಗೊಳಿಸಿರುವುದರಿಂದ ಅರ್ಹ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಅಪಾಯವಿದೆ ಎಂದು ಹೇಳಿದೆ.
ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಪೀಠವು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಕ್ರಮದ ಬಗ್ಗೆ ಸಮಸ್ಯೆಯಿಲ್ಲ, ಸಮಸ್ಯೆ ಇರುವುದು ಕ್ರಮವನ್ನು ಕೈಗೊಂಡ ʼಸಮಯʼದ ಬಗ್ಗೆ ಎಂದು ಹೇಳಿದೆ. ಮತದಾರರ ಪಟ್ಟಿಯಿಂದ ಹೆಸರುಗಳು ಡಿಲಿಟ್ ಆದರೆ ಮತದಾರರಿಗೆ ಚುನಾವಣೆಗೆ ಮೊದಲು ಮೇಲ್ಮನವಿ ಸಲ್ಲಿಸಲು ಅಥವಾ ಪರಿಹಾರ ಪಡೆಯಲು ಸಾಕಷ್ಟು ಸಮಯ ಸಿಗದಿರಬಹುದು ಎಂದು ನ್ಯಾಯಾಲಯ ಗಮನಿಸಿದೆ.
ʼಚುನಾವಣೆ ಸಮೀಪಿಸುತ್ತಿದ್ದಂತೆ ಓರ್ವ ವ್ಯಕ್ತಿಯನ್ನು ಮತದಾನದಿಂದ ವಂಚಿತನನ್ನಾಗಿಸುತ್ತದೆ. ಮತದಾನದ ಮೊದಲು ತನ್ನ ಹಕ್ಕನ್ನು ಸಮರ್ಥಿಸಿಕೊಳ್ಳಲು ಆತನಿಗೆ ಸಮಯವಿರುವುದಿಲ್ಲ. ಇದನ್ನು ಹೊರತುಪಡಿಸಿ ಈ ಕ್ರಮದಲ್ಲಿ ಯಾವುದೇ ತಪ್ಪಿಲ್ಲʼ ಎಂದು ನ್ಯಾಯಮೂರ್ತಿ ಧುಲಿಯಾ ನೇತೃತ್ವದ ಪೀಠವು ಹೇಳಿದೆ.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ್, ಮತದಾರರ ಪಟ್ಟಿ ಪರಿಷ್ಕರಣೆಯು, ಒಂದು ದಶಕಕ್ಕೂ ಹೆಚ್ಚು ಕಾಲ ಪಟ್ಟಿಯಲ್ಲಿದ್ದ ಮತದಾರರ ಮೇಲೆ ಪರಿಣಾಮ ಬೀರುತ್ತದೆ. ಇದು"ನಿರಂಕುಶ" ಮತ್ತು "ತಾರತಮ್ಯ ದಿಂದ ಕೂಡಿದೆ ಎಂದು ವಾದಿಸಿದರು.
ಚುನಾವಣಾ ಆಯೋಗದ ಕ್ರಮವನ್ನು ಸಂವಿಧಾನಿಕವಾಗಿ ಅನುಮತಿಸಲಾಗಿದೆ. ಚುನಾವಣಾ ಆಯೋಗದ ಕ್ರಮದಲ್ಲಿ ಯಾವುದೇ ತರ್ಕವಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಇದೇ ವೇಳೆ ನ್ಯಾಯಾಲಯ ಹೇಳಿದೆ. ಆದರೆ, ಮತದಾರರ ಪಟ್ಟಿ ಪರಿಷ್ಕಣೆಯ ʼಸಮಯʼ ದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ.







