ಮತದಾರರ ಪಟ್ಟಿಯಲ್ಲಿ ವಂಚನೆ ಆರೋಪ : ಎಸ್ಐಟಿ ತನಿಖೆಗೆ ಆದೇಶಿಸಲು ಸುಪ್ರೀಂ ಕೋರ್ಟ್ ನಕಾರ

Photo credit: PTI
ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆರೋಪದ ಕುರಿತು ವಿಶೇಷ ತನಿಖಾ ತಂಡದ (SIT) ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸೋಮವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಇದೇ ವೇಳೆ, ಈ ವಿಚಾರವನ್ನು ಭಾರತೀಯ ಚುನಾವಣಾ ಆಯೋಗದ ಮುಂದೆ ಮಂಡಿಸಿ ಎಂದೂ ನ್ಯಾ. ಸೂರ್ಯ ಕಾಂತ್ ಹಾಗೂ ನ್ಯಾ. ಜೋಯ್ ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿದಾರರಿಗೆ ಸೂಚಿಸಿದೆ. ಇದಕ್ಕೆ ಪ್ರತಿಯಾಗಿ, ಭಾರತೀಯ ಚುನಾವಣಾ ಆಯೋಗದೆದುರು ಈಗಾಗಲೇ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದರೂ, ಚುನಾವಣಾ ಆಯೋಗ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.
ಆದರೆ, ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದ ನ್ಯಾಯಪೀಠ, ಅರ್ಜಿದಾರರು ಈ ಕುರಿತು ಭಾರತೀಯ ಚುನಾವಣಾ ಆಯೋಗದೆದುರು ಮನವಿ ಸಲ್ಲಿಸಬಹುದು ಎಂದು ಅಭಿಪ್ರಾಯ ಪಟ್ಟಿತು. ಈ ಕುರಿತು ನಿರ್ಧಾರ ಕೈಗೊಳ್ಳಗಲು ಭಾರತೀಯ ಚುನಾವಣಾ ಆಯೋಗಕ್ಕೆ ಸಮಯ ಮಿತಿ ನಿಗದಿಗೊಳಿಸಿ ಎಂಬ ಅರ್ಜಿದಾರರ ಪರ ವಕೀಲರ ಮನವಿಯನ್ನೂ ನ್ಯಾಯಪೀಠ ನಿರಾಕರಿಸಿತು.
ರೋಹಿತ್ ಪಾಂಡೆ ಎಂಬವರು ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಾಲಯದ ನಿರ್ದೇಶನ ಪಾಲನೆ ಮಾಡುವವರೆಗೂ ಮತ್ಯಾವುದೇ ಮತಪಟ್ಟಿ ಪರಿಷ್ಕರಣೆ ಅಥವಾ ಅಂತಿಮಗೊಳಿಸುವಿಕೆ ಕೈಗೊಳ್ಳಬಾರದು ಹಾಗೂ ಮತಪಟ್ಟಿಯ ಸ್ವತಂತ್ರ ಮೌಲ್ಯಮಾಪನ ಮುಕ್ತಾಯಗೊಳ್ಳುವವರೆಗೂ ಮತಪಟ್ಟಿ ಪರಿಷ್ಕರಣೆಯನ್ನು ನಡೆಸಬಾರದು ಎಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಎಂದೂ ಮನವಿ ಮಾಡಲಾಗಿತ್ತು.
ಮತಪಟ್ಟಿಗಳ ಅರ್ಥಪೂರ್ಣ ಪರಿಶೀಲನೆ, ಮೌಲ್ಯಮಾಪನ ಹಾಗೂ ಸಾರ್ವಜನಿಕ ಅವಗಾಹನೆಗಾಗಿ ಮತಪಟ್ಟಿಗಳನ್ನು ಸುಲಭ, ಯಾಂತ್ರಿಕ ಓದುವಿಕೆ ಹಾಗೂ ಒಸಿಆರ್ ಪಾಲಿಸಿದ ಸ್ವರೂಪದಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದೂ ನ್ಯಾಯಾಲಯವನ್ನು ಕೋರಲಾಗಿತ್ತು.
ಆಗಸ್ಟ್ 7ರಂದು ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು.







