ದೇಶಾದ್ಯಂತ ಆನ್ಲೈನ್ ಜೂಜಾಟ ನಿಷೇಧಕ್ಕೆ ಪಿಐಎಲ್; ಕೇಂದ್ರದ ಅಭಿಪ್ರಾಯ ಕೋರಿದ ಸುಪ್ರೀಂ ಕೋರ್ಟ್

Photo credit: deccanherald
ಹೊಸದಿಲ್ಲಿ, ಅ.22: ದೇಶಾದ್ಯಂತ ಸಾಮಾಜಿಕ ಹಾಗೂ ಇ-ಸ್ಪೋರ್ಟ್ಸ್ ಆಟಗಳ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆನ್ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ವೇದಿಕೆಗಳನ್ನು ನಿಷೇಧಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಹಿನ್ನಲೆಯಲ್ಲಿ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯ ಕೋರಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು, ಅರ್ಜಿದಾರರಾದ ಸೆಂಟರ್ ಫಾರ್ ಅಕೌಂಟೆಬಿಲಿಟಿ ಅಂಡ್ ಸಿಸ್ಟಮಿಕ್ ಚೇಂಜ್ (CASC) ಪರ ವಕೀಲರಿಗೆ ಪಿಐಎಲ್ನ ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವಂತೆ ನಿರ್ದೇಶಿಸಿದೆ.
ಅರ್ಜಿಯಲ್ಲಿ, ಆನ್ಲೈನ್ ಗೇಮಿಂಗ್, ಜೂಜಾಟ ಮತ್ತು ಬೆಟ್ಟಿಂಗ್ ವೇದಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರಕ್ಕೆ ಸ್ಪಷ್ಟ ನಿರ್ದೇಶನ ನೀಡುವಂತೆ ಕೋರುವುದರ ಜೊತೆಗೆ, ನೋಂದಣಿಯಾಗದ ಗೇಮಿಂಗ್ ಅಪ್ಲಿಕೇಶನ್ಗಳ ಮೂಲಕ ನಡೆಯುವ ಹಣಕಾಸು ವಹಿವಾಟುಗಳನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI), ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ಯುಪಿಐ (UPI) ಪ್ಲಾಟ್ಫಾರ್ಮ್ಗಳಿಗೆ ಮಾರ್ಗಸೂಚಿ ನೀಡುವಂತೆ ಮನವಿ ಮಾಡಲಾಗಿದೆ.
ಇದಲ್ಲದೆ, 2 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ತೆರಿಗೆ ಬಾಕಿ ಇರುವ ಆಫ್ಶೋರ್ ಗೇಮಿಂಗ್ ಕಂಪೆನಿಗಳ ವಿರುದ್ಧ ಇಂಟರ್ಪೋಲ್, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಈಡಿ) ಮೂಲಕ ತನಿಖೆ ನಡೆಸಿ ತೆರಿಗೆ ವಸೂಲಿ ಮಾಡಲು ಕೋರಲಾಗಿದೆ.
ಅರ್ಜಿದಾರರು ಉಲ್ಲೇಖಿಸಿರುವಂತೆ, ಆನ್ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ, 2025ರ ಅಡಿಯಲ್ಲಿ ಸಮಾಜದ ಕಲ್ಯಾಣಕ್ಕಾಗಿ ಸುರಕ್ಷಿತ ಡಿಜಿಟಲ್ ಮನರಂಜನೆಯನ್ನು ಉತ್ತೇಜಿಸುವುದರ ಜೊತೆಗೆ ಆರ್ಥಿಕ ಹಾನಿಕಾರಕ ಚಟುವಟಿಕೆಗಳನ್ನು ತಡೆಗಟ್ಟಲು ಸಮಗ್ರ ಚೌಕಟ್ಟು ರೂಪಿಸಲಾಗಿದೆ. ಇದರಡಿ ಆನ್ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ವೇದಿಕೆಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಮಾಹಿತಿ ಮತ್ತು ಪ್ರಸಾರ, ಹಣಕಾಸು ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ.
ಅರ್ಜಿಯಲ್ಲಿ, ಭಾರತದಲ್ಲಿ ಸುಮಾರು 65 ಕೋಟಿಗೂ ಹೆಚ್ಚು ಜನರು ಇಂತಹ ಆನ್ಲೈನ್ ಆಟಗಳಲ್ಲಿ ತೊಡಗಿಸಿಕೊಂಡಿದ್ದು, ವರ್ಷಕ್ಕೆ 1.8 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ವ್ಯವಹಾರ ನಡೆಯುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ದೇಶದಲ್ಲಿ ಆರ್ಥಿಕ ಹಾನಿ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಆತ್ಮಹತ್ಯೆಗಳಂತಹ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿದೆ ಎಂದು ಪಿಐಎಲ್ ಎಚ್ಚರಿಸಿದೆ.
ಕ್ರಿಕೆಟಿಗರು ಮತ್ತು ಸಿನಿತಾರೆಯರು ಇಂತಹ ಕಾನೂನುಬಾಹಿರ ಆನ್ಲೈನ್ ವೇದಿಕೆಗಳಿಗೆ ಪ್ರಚಾರ ನೀಡುತ್ತಿರುವುದರಿಂದ ಯುವಜನರಲ್ಲಿ ವ್ಯಸನ, ಸೈಬರ್ ವಂಚನೆ ಮತ್ತು ಮಾನಸಿಕ ಅಸ್ವಸ್ಥತೆಗಳು ಹೆಚ್ಚುತ್ತಿರುವುದಾಗಿ ಅರ್ಜಿಯಲ್ಲಿ ಆರೋಪಿಸಲಾಗಿದೆ.
“ಆನ್ಲೈನ್ ಆಟಗಳ ಹೆಸರಿನಲ್ಲಿ ಹಣ ವರ್ಗಾವಣೆ ಚಟುವಟಿಕೆಗಳು ನಡೆಯುತ್ತಿದ್ದು, ಯಾರು ನಿಜವಾಗಿ ಆಡುತ್ತಿದ್ದಾರೆಂಬುದನ್ನು ಗುರುತಿಸಲು ಅಸಾಧ್ಯವಾಗಿದೆ,” ಎಂದು CASC ಪಿಐಎಲ್ನಲ್ಲಿ ಹೇಳಿದೆ.
ಅರ್ಜಿಯಲ್ಲಿ ಕಾನೂನುಬಾಹಿರ ಬೆಟ್ಟಿಂಗ್ ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳನ್ನು ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ತಕ್ಷಣ ನಿರ್ಬಂಧಿಸಲು ಹಾಗೂ ಅಪ್ರಾಪ್ತ ವಯಸ್ಕರ ಡೇಟಾ ರಕ್ಷಣೆಗಾಗಿ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಈ ಪ್ರಕರಣದಲ್ಲಿ ಕೇಂದ್ರದ ನಾಲ್ಕು ಸಚಿವಾಲಯಗಳು ಹಾಗೂ ಆಪ್ ಸ್ಟೋರ್ ಆಪರೇಟರ್ಗಳಾದ ಆಪಲ್ ಇಂಡಿಯಾ ಮತ್ತು ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಆರು ಪ್ರತಿವಾದಿಗಳನ್ನು ಹೆಸರಿಸಲಾಗಿದೆ.
ದೇಶಾದ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಾಟ ಚಟುವಟಿಕೆಗಳಿಂದ ಉಂಟಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಹಾನಿಯನ್ನು ತಡೆಗಟ್ಟಲು ಕೇಂದ್ರ ಸರ್ಕಾರದ ಸ್ಪಷ್ಟ ನಿಲುವು ತಿಳಿಯುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಮುಂದಿನ ವಿಚಾರಣೆ ಎರಡು ವಾರಗಳ ಬಳಿಕ ನಡೆಯಲಿದೆ.







