ಮಿಲಿಟರಿ ತರಬೇತಿ ವೇಳೆ ಗಾಯಗೊಂಡು ಸೇನೆಯಿಂದ ಹೊರಗುಳಿದು ಸಂಕಷ್ಟದಲ್ಲಿರುವ ಕೆಡೆಟ್ಗಳು: ವರದಿ ಬೆನ್ನಲ್ಲೇ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ (Photo credit: PTI)
ಹೊಸದಿಲ್ಲಿ: ಸೇನಾ ತರಬೇತಿ ಸಮಯದಲ್ಲಿ ಗಾಯಗೊಂಡು ವೈದ್ಯಕೀಯ ಕಾರಣದಿಂದ ಮಿಲಿಟರಿ ಸಂಸ್ಥೆಗಳಿಂದ ಬಿಡುಗಡೆಯಾದ ಕೆಡೆಟ್ಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು ಸೋಮವಾರ ವಿಚಾರಣೆ ನಡೆಸಲಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಮತ್ತು ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ)ಯಂತಹ ದೇಶದ ಉನ್ನತ ಮಿಲಿಟರಿ ಸಂಸ್ಥೆಗಳಲ್ಲಿ ತರಬೇತಿಯ ಭಾಗವಾಗಿದ್ದ ಕೆಡೆಟ್ಗಳ ಸಮಸ್ಯೆ ಬಗ್ಗೆ ಮಾಧ್ಯಮ ವರದಿಯ ನಂತರ ಸುಪ್ರೀಂ ಕೋರ್ಟ್ ಈ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಮಾಧ್ಯಮ ವರದಿಯ ಪ್ರಕಾರ, 1985ರಿಂದ ಇಂದಿನವರೆಗೆ ತರಬೇತಿಯ ಸಮಯದಲ್ಲಿ ಉಂಟಾದ ಅಂಗವೈಕಲ್ಯ ಅಥವಾ ಗಾಯಗಳಿಂದ ಮಿಲಿಟರಿ ಸಂಸ್ಥೆಗಳಿಂದ ಸುಮಾರು 500 ಕೆಡೆಟ್ಗಳನ್ನು ಬಿಡುಗಡೆ ಮಾಡಲಾಗಿದೆ. ಅವರಿಗೆ ತೀರಾ ಕಡಿಮೆ ಮಾಸಿಕ ಪರಿಹಾರ ಧನ ನೀಡಲಾಗುತ್ತಿದೆ ಎಂದು ಹೇಳಿದೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯೊಂದರಲ್ಲೇ 2021 ಮತ್ತು ಜುಲೈ 2025ರ ನಡುವೆ ಕೇವಲ ಐದು ವರ್ಷಗಳಲ್ಲಿ ಇದೇ ರೀತಿಯಾಗಿ ಸುಮಾರು 20 ಕೆಡೆಟ್ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯು ಉಲ್ಲೇಖಿಸಿತ್ತು. ಅಧಿಕೃತ ಅಧಿಕಾರಿಗಳಾಗಿ ನೇಮಕವಾಗುವ ಮೊದಲೇ ಗಾಯಗೊಂಡು ಸೇನೆಯಿಂದ ಹೊರಗುಳಿದ ಕಾರಣ ಇವರನ್ನು ಮಾಜಿ ಸೈನಿಕ ಎಂದು ಪರಿಗಣಿಸಲಾಗುವುದಿಲ್ಲ. ಮಾಜಿ ಸೈನಿಕರಿಗೆ ಸಿಗುವ ವೈದ್ಯಕೀಯ ನೆರವು ಇವರಿಗೆ ಸಿಗುವುದಿಲ್ಲ. ಇದರಿಂದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ವರದಿಯು ಬಹಿರಂಗಪಡಿಸಿತ್ತು.







