ವಿಶ್ವಾಸದ ವಿಷಯ: ಬಿಹಾರ ಎಸ್ಐಆರ್ ಬಗ್ಗೆ ಸ್ವಯಂ ಸಕ್ರಿಯಗೊಳ್ಳಲು ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕರೆ

Photo credit: PTI
ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಗೊಂದಲವು ಹೆಚ್ಚಾಗಿ ‘ವಿಶ್ವಾಸದ ವಿಷಯ’ ವಾಗಿದೆ ಎಂದು ಸೋಮವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು, ತಮ್ಮನ್ನು ತಾವು ಸಕ್ರಿಯಗೊಳಿಸಿಕೊಳ್ಳುವಂತೆ ರಾಜಕೀಯ ಪಕ್ಷಗಳಿಗೆ ಕರೆ ನೀಡಿತು.
ಚುನಾವಣಾ ಆಯೋಗವು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಗಳಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆ.1ರ ಗಡುವನ್ನು ವಿಸ್ತರಿಸುವಂತೆ ಕೋರಿ ಬಿಹಾರದ ರಾಜಕೀಯ ನಾಯಕರು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದ ವಿಷಯವನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜಾಯ್ಮಲ್ಯ ಬಾಗ್ಚಿ ಅವರ ಪೀಠವು ಕೈಗೆತ್ತಿಕೊಂಡಿತ್ತು.
ಸೆ.1ರ ಗಡುವಿನ ನಂತರವೂ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು ಮತ್ತು ಮತದಾರರ ಪಟ್ಟಿಗಳನ್ನು ಅಂತಿಮಗೊಳಿಸಿದ ಬಳಿಕವೂ ಅವುಗಳನ್ನು ಪರಿಗಣಿಸಲಾಗುವುದು ಎಂಬ ಚುನಾವಣಾ ಆಯೋಗದ ಹೇಳಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ಚುನಾವಣಾ ಆಯೋಗದ ಪರ ಹಿರಿಯ ವಕೀಲ ರಾಕೇಶ ದ್ವಿವೇದಿ ಅವರು,ರಾಜಕೀಯ ಪಕ್ಷಗಳು ಕರಡು ಮತದಾರರ ಪಟ್ಟಿಗಳಲ್ಲಿ ಮತದಾರರ ಸೇರ್ಪಡೆಗೆ ಹಕ್ಕುಗಳ ಬದಲು ಅವರನ್ನು ಪಟ್ಟಿಗಳಿಂದ ಅಳಿಸಲು ಕೋರುತ್ತಿವೆ. ಇದು ತುಂಬ ವಿಚಿತ್ರವಾಗಿದೆ ಎಂದು ಹೇಳಿದರು.
ಈ ನಡುವೆ,ಮತದಾರರ ಗುರುತಿನ ದಾಖಲೆಯಾಗಿ ಆಧಾರ್ ಸ್ವೀಕರಿಸುವಂತೆ ಆ.22ರಂದು ಆದೇಶ ಹೊರಡಿಸಲಾಗಿದೆ ಎಂದು ಎತ್ತಿ ತೋರಿಸಿದ ವಕೀಲ ಪ್ರಶಾಂತ ಭೂಷಣ ಅವರು,ಚುನಾವಣಾ ಆಯೋಗವು ಪಾರದರ್ಶಕತೆಯ ಕುರಿತು ತನ್ನದೇ ಆದ ಕೈಪಿಡಿಗಳನ್ನು ಅನುಸರಿಸುತ್ತಿಲ್ಲ ಎಂದು ದೂರಿದರು.
ಸಲ್ಲಿಕೆಯು ಪ್ರಕ್ರಿಯೆಯ ಮೊದಲ ಭಾಗವಾಗಿದೆ ಎಂದು ನ್ಯಾ.ಸೂರ್ಯಕಾಂತ ಹೇಳಿದರು.
ಸೋಮವಾರ ಸರ್ವೋಚ್ಚ ನ್ಯಾಯಾಲಯದ ಮುಂದೆ ಪಟ್ಟಿ ಮಾಡಲಾಗಿರುವ ಅರ್ಜಿಗಳು ಯಾವುದೇ ನಮೂನೆಗಳ ಸಲ್ಲಿಕೆ ಅಥವಾ ಮತದಾರರ ಸೇರ್ಪಡೆಗೆ ಅಥವಾ ಅಳಿಸುವಿಕೆಗೆ ಸಂಬಂಧಿಸಿದ ಪ್ರತಿಪಾದನೆಗಳನ್ನು ಒಳಗೊಂಡಿಲ್ಲ ಎಂದು ದ್ವಿವೇದಿ ವಾದಿಸಿದರು.
ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ಈ ನಿರ್ದಿಷ್ಟ ಕಳವಳಗಳನ್ನು ಕೈಗೆತ್ತಿಕೊಳ್ಳುವುದು ಉತ್ತಮ ಎಂದು ಹೇಳಿದ ನ್ಯಾ.ಸೂರ್ಯಕಾಂತ ಅವರು,ವಿಶ್ವಾಸದ ಕೊರತೆ ದುರದೃಷ್ಟಕರ. ಕೊರತೆಯನ್ನು ನೀಗಿಸಲು ಸ್ವಯಂಸೇವಕರನ್ನು ಒದಗಿಸುವಂತೆ ನಾವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸುತ್ತೇವೆ ಎಂದು ತಿಳಿಸಿದರು.
ನಾಮಪತ್ರಗಳ ಸಲ್ಲಿಕೆಗೆ ಅಂತಿಮ ದಿನಾಂಕದವರೆಗೂ ಎಸ್ಐಆರ್ ಮುಂದುವರಿಯುತ್ತದೆ ಮತ್ತು ಎಲ್ಲ ಸೇರ್ಪಡೆಗಳು/ಹೊರಗಿಡುವಿಕೆಯನ್ನು ಅಂತಿಮ ಪಟ್ಟಿಯಲ್ಲಿ ಪರಿಗಣಿಸಲಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿತು.







