ಪೊಕ್ಸೊ ಕಾಯ್ದೆಯ ದುರ್ಬಳಕೆ ತಡೆಗೆ ʼರೋಮಿಯೊ-ಜ್ಯೂಲಿಯೆಟ್ʼ ನಿಯಮ ತನ್ನಿ: ಸರಕಾರಕ್ಕೆ ಸುಪ್ರೀಂ ಕೋರ್ಟ್ ಕಿವಿಮಾತು

ಸುಪ್ರೀಂ ಕೋರ್ಟ್ (Photo: PTI)
ಹೊಸದಿಲ್ಲಿ: ಪೊಕ್ಸೊ ಕಾಯ್ದೆಯ ದುರುಪಯೋಗಕ್ಕೆ ಅಂತ್ಯ ಹಾಡಲು ಅದರ ಕಠಿಣ ನಿಬಂಧನೆಗಳಿಂದ ನಿಜವಾದ ಹದಿಹರೆಯದ ಸಂಬಂಧಗಳಿಗೆ ವಿನಾಯಿತಿ ನೀಡಲು ‘ರೋಮಿಯೊ-ಜ್ಯೂಲಿಯೆಟ್’ ನಿಯಮವನ್ನು ಪರಿಚಯಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಸರಕಾರಕ್ಕೆ ಸಲಹೆಯನ್ನು ನೀಡಿದೆ.
ಈ ಕಾನೂನಿನ ದುರುಪಯೋಗವನ್ನು ನ್ಯಾಯಾಂಗವು ಪದೇ ಪದೇ ಗಮನಿಸಿರುವ ಹಿನ್ನೆಲೆಯಲ್ಲಿ ಈ ಪಿಡುಗನ್ನು ತಡೆಯಲು ಸಾಧ್ಯವಿರಬಹುದಾದ ಕ್ರಮವನ್ನು ಕೈಗೊಳ್ಳುವುದು; ನಿಜವಾದ ಹದಿಹರೆಯದ ಸಂಬಂಧಗಳಿಗೆ ಈ ಕಾಯ್ದೆಯ ಹಿಡಿತದಿಂದ ವಿನಾಯಿತಿ ನೀಡಲು ರೋಮಿಯೊ-ಜ್ಯೂಲಿಯೆಟ್ ನಿಯಮವನ್ನು ತರುವುದು; ಈ ಕಾನೂನನ್ನು ಬಳಸಿಕೊಂಡು ಹಳೆಯ ದ್ವೇಷಗಳನ್ನು ತೀರಿಸಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಅನುವು ಮಾಡಿ ಕೊಡುವ ಕಾರ್ಯವಿಧಾನವನ್ನು ಜಾರಿಗೆ ತರುವುದು ಇತ್ಯಾದಿಗಳನ್ನು ಸರಕಾರವು ಪರಿಗಣಿಸಬಹುದಾಗಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಸಂಜಯ ಕರೋಲ್ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು, ತೀರ್ಪಿನ ಪ್ರತಿಯನ್ನು ಭಾರತ ಸರಕಾರದ ಕಾನೂನು ಕಾರ್ಯದರ್ಶಿಗೆ ಕಳುಹಿಸುವಂತೆ ಆದೇಶಿಸಿತು.
ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿತ್ತು.
ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ ಪೀಠವು,ಪೊಕ್ಸೊ ಕಾಯ್ದೆಯಡಿ ಪ್ರಕರಣಗಳಲ್ಲಿ ಜಾಮೀನು ಹಂತದಲ್ಲಿ ವೈದ್ಯಕೀಯ ತಪಾಸಣೆಯ ಮೂಲಕ ಸಂತ್ರಸ್ತರ ವಯಸ್ಸಿನ ನಿರ್ಣಯವನ್ನು ಕಡ್ಡಾಯಗೊಳಿಸಿ ಉಚ್ಚ ನ್ಯಾಯಾಲಯಗಳು ಆದೇಶಿಸುವಂತಿಲ್ಲ ಎಂದೂ ಸ್ಪಷ್ಟಪಡಿಸಿತು.
‘ಕಿರು ವಿಚಾರಣೆಗಳನ್ನು’ ನಡೆಸಲು ಅಥವಾ ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ವಿರುದ್ಧವಾದ ಕಡ್ಡಾಯ ತನಿಖಾ ಕಾರ್ಯವಿಧಾನಗಳನ್ನು ಹೊರಡಿಸಲು ಉಚ್ಚ ನ್ಯಾಯಾಲಯವು ತನ್ನ ಜಾಮೀನು ಅಧಿಕಾರ ವ್ಯಾಪ್ತಿಯನ್ನು ಬಳಸುವಂತಿಲ್ಲ ಎಂದು ಪೀಠವು ಹೇಳಿತು.
ಹೈಕೋರ್ಟ್ ಒಂದು ಸಾಂವಿಧಾನಿಕ ನ್ಯಾಯಾಲಯ ಎನ್ನುವುದು ಪ್ರಶ್ನಾತೀತವಾಗಿದೆ. ಆದಾಗ್ಯೂ ಈ ಪ್ರಕರಣದಲ್ಲಿ ಶಾಸನಬದ್ಧ ಅಧಿಕಾರವನ್ನು ಚಲಾಯಿಸುವುದರಲ್ಲಿ ಉಚ್ಚ ನ್ಯಾಯಾಲಯದಿಂದ ನ್ಯಾಯವ್ಯಾಪ್ತಿಯ ತಪ್ಪು ನಡೆದಿದೆ,ಸಂವಿಧಾನದ ಅಡಿಯಲ್ಲಿ ಅಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.
ಏನಿದು ರೋಮಿಯೊ-ಜ್ಯೂಲಿಯೆಟ್ ನಿಯಮ?
ಇದು ಪರಸ್ಪರರ ವಯಸ್ಸಿನಲ್ಲಿ ಅಲ್ಪ ಅಂತರವಿರುವ ಹದಿಹರೆಯದ ಬಾಲಕ ಮತ್ತು ಬಾಲಕಿ ನಡುವೆ ಪರಸ್ಪರ ಸಮ್ಮತಿಯ ಸಂಬಂಧಗಳಿಗೆ ಕಾನೂನಿನ ರಕ್ಷಣೆಯನ್ನು ನೀಡುವ ಅಥವಾ ದಂಡನೆಯಲ್ಲಿ ಉದಾರತೆಯನ್ನು ತೋರುವ ಕಾನೂನು ತತ್ವವಾಗಿದೆ.
ಭಾರತದಲ್ಲಿ 2012ರ ಪೊಕ್ಸೊ ಕಾಯ್ದೆಯಡಿ ಇಂತಹ ಸಂಬಂಧಗಳಿಗೆ ಸ್ಪಷ್ಟ ವಿನಾಯಿತಿಯಿಲ್ಲ. ಆದರೆ ವಿವಿಧ ನ್ಯಾಯಾಲಯಗಳು ಮತ್ತು ಕಾನೂನು ಆಯೋಗಗಳು ಪರಸ್ಪರ ಸಮ್ಮತಿ, ವಯಸ್ಸಿನ ಕಡಿಮೆ ಅಂತರ ಮತ್ತು ದುರುದ್ದೇಶದ ಅಭಾವ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಇಂತಹ ಪ್ರಕರಣಗಳಲ್ಲಿ ವೈಚಾರಿಕ ಹಾಗೂ ಮಾನವೀಯ ದೃಷ್ಟಿಕೋನ ಅಗತ್ಯ ಎಂದು ಅಭಿಪ್ರಾಯಿಸಿವೆ.







