ʼಸ್ಥಾನಾರ್ಥಿ ಶ್ರೀಕುಟ್ಟನ್ʼ ಚಲನಚಿತ್ರದಿಂದ ಪ್ರೇರಿತವಾಗಿ ಹೊಸ ಆಸನ ಕ್ರಮ ಅಳವಡಿಸಿಕೊಂಡ ಕೇರಳದ ಶಾಲೆಗಳು
ʼಬ್ಯಾಕ್ಬೆಂಚರ್ʼ ಪರಿಕಲ್ಪನೆಯನ್ನು ತೆಗೆದುಹಾಕಲು ಕ್ರಮ!

ಸಾಂದರ್ಭಿಕ ಚಿತ್ರ (credit: keralakaumudi.com)
ಕೊಚ್ಚಿ: ʼಸ್ಥಾನಾರ್ಥಿ ಶ್ರೀಕುಟ್ಟನ್ʼ ಚಲನಚಿತ್ರದಿಂದ ಪ್ರೇರಣೆಗೊಂಡು ಅರ್ಧವೃತ್ತಾಕಾರದ ಅಥವಾ ಯು-ಆಕಾರದ ಆಸನ ವ್ಯವಸ್ಥೆಯನ್ನು ಕೇರಳದ ಹಲವು ಶಾಲೆಗಳು ಅಳವಡಿಸಿಕೊಂಡಿದೆ. ಈ ಮೂಲಕ ಫಸ್ಟ್ ಮತ್ತು ಲಾಸ್ಟ್ ಬೆಂಚರ್ಗಳೆಂಬ ಭಾರತೀಯ ತರಗತಿಗಳ ಅಂತರದ ವ್ಯವಸ್ಥೆಯನ್ನು ಬದಲಾಯಿಸಿದೆ.
'ಸ್ಥಾನಾರ್ಥಿ ಶ್ರೀಕುಟ್ಟನ್ ತಿರುವನಂತಪುರಂನ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಒಂದು ಸರಳ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ಶಾಲಾ ಮಕ್ಕಳ ಬದುಕಿನ ಸಣ್ಣ ಕ್ಷಣಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರ ಈಗ ಕೇರಳದಲ್ಲಿ ಶಾಲಾ ಅಧ್ಯಾಪನ ಶೈಲಿಯಲ್ಲಿಯೇ ಬದಲಾವಣೆಗೆ ಕಾರಣವಾಗಿದೆ. ಹೊಸ ಪ್ರವೃತ್ತಿಯು ಉತ್ತಮ ಸಂವಹನ ಮತ್ತು ವಿದ್ಯಾರ್ಥಿಗಳಲ್ಲಿ ಪಾಲ್ಗೊಳ್ಳುವಿಕೆಯ ಗುರಿಯನ್ನು ಉತ್ತೇಜಿಸುತ್ತದೆ. ಇದುಬ್ಯಾಕ್ಬೆಂಚರ್ ಪರಿಕಲ್ಪನೆಯನ್ನು ತೆಗೆದುಹಾಕುತ್ತದೆ.
ಈ ಚಿತ್ರದ ನಿರ್ದೇಶನದ ಮೂಲಕ ವಿನೇಶ್ ವಿಶ್ವನಾಥ್ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕನಿಷ್ಠ ಆರು ಶಾಲೆಗಳು ಈಗಾಗಲೇ ಅರ್ಧವೃತ್ತಾಕಾರದ ಅಥವಾ ʼಯುʼ ಆಕಾರದ ಆಸನ ವ್ಯವಸ್ಥೆಯನ್ನು ಪರಿಚಯಿಸಿವೆ ಎಂದು ವಿನೇಶ್ ವಿಶ್ವನಾಥ್ ಹೇಳಿದ್ದಾರೆ.
ತಿರುವನಂತಪುರಂನ ಸರಕಾರಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ವಿನೇಶ್, 'ನಾನು ಪ್ರಾಥಮಿಕ ತರಗತಿಯಲ್ಲಿ ಈ ರೀತಿಯಲ್ಲಿ ಕುಳಿತಿದ್ದೆ. ಆದರೆ ಈ ದೃಶ್ಯವನ್ನು ಸಿನಿಮಾ ಮಾಡಿದಾಗ ಇಷ್ಟೊಂದು ಶಾಲೆಗಳಲ್ಲಿ ಅದು ತಲುಪುತ್ತದೆ ಎಂದು ನಾವು ಊಹಿಸಿರಲಿಲ್ಲʼ ಎಂದು ಹೇಳಿದರು.
ನಾವು ಚಲನಚಿತ್ರವನ್ನು ಬಿಡುಗಡೆ ಮಾಡುವ ಮೊದಲು ಸಾರಿಗೆ ಸಚಿವ ಕೆ ಬಿ ಗಣೇಶ್ ಕುಮಾರ್ ಅವರಿಗೆ ತೋರಿಸಿದೆವು. ಅವರು ಈ ಕಲ್ಪನೆಯಿಂದ ಪ್ರಭಾವಿತರಾದರು. ಅವರು ಅದನ್ನು ವಲಕೋಮ್ನಲ್ಲಿರುವ ರಾಮವಿಲಾಸಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ (RVHSS) ಜಾರಿಗೆ ತಂದರು. ಅಲ್ಲಿ ಅವರು ಶಾಲಾ ಆಡಳಿತ ಮಂಡಳಿಯ ಭಾಗವಾಗಿದ್ದಾರೆ ಎಂದು ಚಿತ್ರದ ನಿರ್ದೇಶಕ ವಿನೇಶ್ ವಿಶ್ವನಾಥ್ ಹೇಳಿದರು.
ವಿದ್ಯಾರ್ಥಿ ಚುನಾವಣೆಯಲ್ಲಿ ಫಸ್ಟ್ ಬೆಂಚರ್ ವಿದ್ಯಾರ್ಥಿ ಎದುರು ನಿಂತ ಬ್ಯಾಕ್ ಬೆಂಚರ್ ಶ್ರೀಕುಟ್ಟನ್ ಈ ಕಥೆಯ ಮುಖ್ಯ ಪಾತ್ರಧಾರಿ. ವಿಜ್ಞಾನ ಪ್ರದರ್ಶನ ವೇಳೆ ವಿದ್ಯಾರ್ಥಿಗಳ ನಡುವಿನ ಭಿನ್ನತೆಯನ್ನು ಕಡಿಮೆ ಮಾಡಲು ಅವನು ಅರ್ಧವೃತ್ತದ ಕ್ರಮವನ್ನು ಪ್ರಸ್ತಾಪಿಸುತ್ತಾನೆ. ಕೊನೆಗೆ ಶಾಲೆ ಈ ಪ್ರಸ್ತಾಪವನ್ನು ಅಂಗೀಕರಿಸಿ ತನ್ನ ಬೋಧನಾ ಶೈಲಿಯಲ್ಲಿ ಹೊಸ ಬದಲಾವಣೆ ತರುತ್ತದೆ.
ʼಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಚಿತ್ರ ಬಿಡುಗಡೆಯಾದ ನಂತರ ಹಲವಾರು ಶಾಲೆಗಳು ಈ ಆಸನ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಕೇರಳದಲ್ಲಿ ಕನಿಷ್ಠ ಏಳು ಶಾಲೆಗಳು ಮತ್ತು ಪಂಜಾಬ್ನಲ್ಲಿ ಒಂದು ಶಾಲೆ ತಮ್ಮ ತರಗತಿಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಿವೆ. ಇಂತಹ ಸಾಮಾಜಿಕ ಪರಿಣಾಮವನ್ನು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ ಮತ್ತು ಚಲನಚಿತ್ರವು ರಾಷ್ಟ್ರಮಟ್ಟದಲ್ಲಿ ಚರ್ಚಿಸಲ್ಪಡುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆʼ ಎಂದು ವಿಶ್ವನಾಥ್ ಹೇಳಿದರು.
ಆರ್ವಿಎಚ್ಎಸ್ಎಸ್ನ ಪ್ರಾಂಶುಪಾಲರಾದ ಸುನಿಲ್ ಪಿ ಶೇಖರ್ ಈ ಕುರಿತು ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ತರಗತಿಯಲ್ಲಿ ಹಿಂದಿನ ವಿದ್ಯಾರ್ಥಿಗಳು ಹೆಚ್ಚಾಗಿ ಕಡೆಗಣಿಸಲ್ಪಟ್ಟಂತೆ ಭಾಸವಾಗುತ್ತದೆ. ಶಿಕ್ಷಕರು ಉದ್ದೇಶಪೂರ್ವಕವಾಗಿ ಮುಂಭಾಗದಲ್ಲಿರುವವರ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಆದರೆ ಈ ವಿನ್ಯಾಸದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೆಚ್ಚಿನ ಭಾಗವಹಿಸುವಿಕೆಗೆ ಸಾಧ್ಯವಾಗುತ್ತದೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಸಂವಹನ ಮತ್ತು ವಿದ್ಯಾರ್ಥಿಗಳಲ್ಲಿ ಸಮಾನತೆಯ ಪ್ರಜ್ಞೆಯನ್ನು ಕಂಡಿದ್ದೇವೆ ಎಂದು ಹೇಳಿದರು.







