ದಿಲ್ಲಿಯ ವಿವಿಧ ನ್ಯಾಯಾಲಯಗಳಿಗೆ, ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ

Photo Credit : PTI
ಹೊಸದಿಲ್ಲಿ,ನ.18: ದಿಲ್ಲಿಯ ನಾಲ್ಕು ನ್ಯಾಯಾಲಯ ಸಂಕೀರ್ಣಗಳು ಮತ್ತು ಎರಡು ಶಾಲೆಗಳಿಗೆ ಮಂಗಳವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್ಗಳು ಬಂದಿದ್ದು, ಪೋಲಿಸರು ಅಲ್ಲಿಗೆ ಧಾವಿಸಿ ಸಮಗ್ರವಾಗಿ ಶೋಧಿಸಿದ್ದಾರೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇವು ಹುಸಿ ಬೆದರಿಕೆಗಳಾಗಿವೆ ಎಂದು ಪೋಲಿಸರು ಹೇಳಿದ್ದಾರೆ.
ಬಾಂಬ್ ಬೆದರಿಕೆ ಇಮೇಲ್ಗಳು ಬಂದ ಬಳಿಕ ಪಟಿಯಾಳಾ ಹೌಸ್,ಸಾಕೇತ್,ರೋಹಿಣಿ ಮತ್ತು ತೀಸ್ ಹಝಾರಿ ನ್ಯಾಯಾಲಯ ಸಂಕೀರ್ಣಗಳು ಹಾಗೂ ದ್ವಾರಕಾ ಮತ್ತು ಪ್ರಶಾಂತ ವಿಹಾರಗಳಲ್ಲಿಯ ಎರಡು ಸಿಆರ್ಪಿಎಫ್ ಶಾಲೆಗಳನ್ನು ತೆರವುಗೊಳಿಸಿದ ಪೋಲಿಸರು ಬಾಂಬ್ ಪತ್ತೆ ಮತ್ತು ನಿಷ್ಕಿಯ ದಳದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದರು.
ಬೆಳಿಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಬಂದಿದ್ದ ಇಮೇಲ್ನಲ್ಲಿ ‘ಭಾರತಕ್ಕೆ ಶುಭೋದಯ,ಅಲ್ಲಾಹ್ನ ಜನರಿಗೆ ನಿರಂತರ ಅನ್ಯಾಯವಾಗುತ್ತಿರುವುದರಿಂದ ಅಲ್ಲಾಹ್ನ ಈ ನ್ಯಾಯಾಲಯವು ದಿಲ್ಲಿಯ ಪಟಿಯಾಳಾ,ಸಾಕೇತ್,ರೋಹಿಣಿ ಮತ್ತು ತೀಸ್ ಹಝಾರಿ ನ್ಯಾಯಾಲಯ ಸಂಕೀರ್ಣಗಳನ್ನು ಬಾಂಬ್ ಸ್ಫೋಟದ ಮೂಲಕ ಧ್ವಂಸಗೊಳಿಸಲು ಆದೇಶಿಸಿದೆ. ಆದೇಶವು ಇಂದಿನಿಂದಲೇ ಜಾರಿಗೊಳ್ಳಲಿದೆ’ ಎಂದು ಬರೆಯಲಾಗಿತ್ತು.
ಇಮೇಲ್ ರವಾನಿಸಿದ್ದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದರು.
ಸುಮಾರು ಎರಡು ಗಂಟೆಗಳ ಕಾಲ ನ್ಯಾಯಾಲಯದ ಕಲಾಪಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಸಾಕೇತ್ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಅನಿಲ ಬಸೋಯಾ ತಿಳಿಸಿದರು.







