ವಿಜ್ಞಾನ, ನ್ಯಾಯಾಂಗ ಹಾಗೂ ಪೊಲೀಸ್ ಸಂವಹನ ಹಿಂದಿ ಭಾಷೆಯಲ್ಲಾಗಬೇಕು: ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ (PTI)
ಗಾಂಧಿನಗರ: ಹಿಂದಿ ಹಾಗೂ ಇತರ ಭಾರತೀಯ ಭಾಷೆಗಳ ನಡುವೆ ಯಾವುದೇ ಬಿಕ್ಕಟ್ಟಿಲ್ಲ ಎಂದು ರವಿವಾರ ಸ್ಪಷ್ಟಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿಂದಿ ಕೇವಲ ಮಾತನಾಡುವ ಭಾಷೆಯಾಗಿ ಮಾತ್ರ ಸೀಮಿತವಾಗಬಾರದು, ಬದಲಿಗೆ, ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ ಹಾಗೂ ಪೊಲೀಸ್ ಸಂವಹನ ಭಾಷೆಯಾಗಬೇಕು ಎಂದು ಒತ್ತಿ ಹೇಳಿದರು.
5ನೇ ಅಖಿಲ ಭಾರತೀಯ ರಾಜಭಾಷೆ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಭಾರತೀಯರು ತಮ್ಮ ಭಾಷೆಗಳನ್ನು ರಕ್ಷಿಸಬೇಕು ಹಾಗೂ ಅವನ್ನು ಅಮರವಾಗಿಸಲು ಪೋಷಕರು ತಮ್ಮ ಮಕ್ಕಳೊಂದಿಗೆ ಮಾತೃಭಾಷೆಯಲ್ಲೇ ಮಾತನಾಡಬೇಕು” ಎಂದು ಕರೆ ನೀಡಿದರು.
“ಹಿಂದಿ ಹಾಗೂ ಇತರ ಭಾರತೀಯ ಭಾಷೆಗಳ ನಡುವೆ ಯಾವುದೇ ಬಿಕ್ಕಟ್ಟಿಲ್ಲ. ಜ್ಞಾನಿಗಳಾಗಿದ್ದ ದಯಾನಂದ್ ಸರಸ್ವತಿ, ಮಹಾತ್ಮ ಗಾಂಧಿ, ಕೆ.ಎಂ.ಮುನ್ಷಿ, ಸರ್ದಾರ್ ವಲ್ಲಭ ಭಾಯಿ ಪಟೇಲ್ ಹಾಗೂ ಇನ್ನೂ ಅನೇಕರು ಹಿಂದಿಯನ್ನು ಸ್ವೀಕರಿಸಿದ್ದರು ಹಾಗೂ ಅದನ್ನು ಪ್ರಚಾರ ಮಾಡಿದ್ದರು. ಹಿಂದಿ ಹಾಗೂ ಗುಜರಾತಿ ಭಾಷೆಗಳ ಸಹ ಅಸ್ತಿತ್ವ ಹೊಂದಿರುವ ಗುಜರಾತ್ ಎರಡೂ ಭಾಷೆಗಳ ಅಭಿವೃದ್ಧಿಗೆ ಒಂದು ಅತ್ಯುತ್ತಮ ಉದಾಹರಣೆ” ಎಂದು ಅವರು ಶ್ಲಾಘಿಸಿದರು.
“ಹಿಂದಿ ಕೇವಲ ಮಾತನಾಡುವ ಅಥವಾ ಮಾತನಾಡುವ ಭಾಷೆ ಮಾತ್ರವಲ್ಲ. ಅದು ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ ಹಾಗೂ ಪೊಲೀಸ್ ಸಂವಹನ ಭಾಷೆಯೂ ಆಗಬೇಕು. ಭಾರತೀಯ ಭಾಷೆಗಳಲ್ಲಿ ಈ ಎಲ್ಲವನ್ನೂ ಮಾಡಿದಾಗ, ಸಾರ್ವಜನಿಕರೊಂದಿಗಿನ ಸಂಪರ್ಕ ತನ್ನಿಂತಾನೆ ಬೆಳೆಯಲಿದೆ” ಎಂದು ಅವರು ಪ್ರತಿಪಾದಿಸಿದರು.







