ಆತ್ಮಹತ್ಯೆಗೆ ಬೈಗುಳ ಪ್ರಚೋದನೆ ಎಂದು ಹೇಳಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Photo credit: PTI
ಹೊಸದಿಲ್ಲಿ: ವಿದ್ಯಾರ್ಥಿಯೊಬ್ಬನನ್ನು ಗದರಿಸುವ ಮೂಲಕ ಆತ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪಕ್ಕೆ ಒಳಗಾದ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ.
ಶಾಲೆ ಹಾಗೂ ಹಾಸ್ಟೆಲ್ನ ಉಸ್ತುವಾರಿಯಾಗಿದ್ದ ಈ ಆರೋಪಿ ಮತ್ತೊಬ್ಬ ವಿದ್ಯಾರ್ಥಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೃತ ವಿದ್ಯಾರ್ಥಿಯನ್ನು ಬೈದಿದ್ದನು. ಈ ಘಟನೆಯ ನಂತರ ವಿದ್ಯಾರ್ಥಿ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠ, ಬೈಯುವುದರ ಪರಿಣಾಮ ಇಂತಹ ದುರಂತ ಸಂಭವಿಸುತ್ತದೆ ಎಂದು ಸಾಮಾನ್ಯ ವ್ಯಕ್ತಿ ಕೂಡ ಕಲ್ಪಿಸಲು ಸಾಧ್ಯವಿಲ್ಲ ಹೇಳಿದೆ.
‘‘ಈ ವಿಷಯವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಇದು ಹಸ್ತಕ್ಷೇಪಕ್ಕೆ ಅರ್ಹವಾದ ಪ್ರಕರಣ ಎಂದು ನಾವು ಪರಿಗಣಿಸಿದ್ದೇವೆ. ವಿದ್ಯಾರ್ಥಿಯೊಬ್ಬನ ದೂರಿನ ಆಧಾರದ ಮೇಲೆ ಮತ್ತೊಬ್ಬ ವಿದ್ಯಾರ್ಥಿಯನ್ನು ಬೈಯುವುದರಿಂದ ಆತ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ ಎಂದು ಸಾಮಾನ್ಯ ಮನುಷ್ಯ ಕೂಡ ಕಲ್ಪಿಸಲು ಸಾಧ್ಯವಿಲ್ಲ ’’ ಎಂದು ಪೀಠ ಹೇಳಿದೆ.
ಮೃತ ವಿದ್ಯಾರ್ಥಿಯ ಬಗ್ಗೆ ಮತ್ತೊಬ್ಬ ವಿದ್ಯಾರ್ಥಿ ನೀಡಿದ ದೂರನ್ನು ಪರಿಗಣಿಸಿ ಸಮಸ್ಯೆ ಪರಿಹರಿಸುವ ಸಲುವಾಗಿ ಮಾತ್ರವೇ ವಿದ್ಯಾರ್ಥಿಗೆ ಬೈಯಲಾಯಿತು. ಇದನ್ನು ಹೊರತುಪಡಿಸಿ ಆರೋಪಿಗೆ ಇತರ ಯಾವುದೇ ಉದ್ದೇಶ ಇರಲಿಲ್ಲ ಎಂದು ಪೀಠ ಹೇಳಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಈ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಉಚ್ಛ ನ್ಯಾಯಾಲಯ ಆರೋಪಿ ವಿರುದ್ಧದ ಈ ಪ್ರಕರಣ ಕೈಬಿಡಲು ನಿರಾಕರಿಸಿತ್ತು.







