ಬಿಎಂಸಿ ಮೇಯರ್ ಹುದ್ದೆಗೆ ಹಗ್ಗಜಗ್ಗಾಟ; ಮಾತುಕತೆಗೆ ತಾತ್ಕಾಲಿಕ ವಿರಾಮ

PC: x.com/News9Tweets
ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯ ಮೇಯರ್ ಗಾದಿಗಾಗಿ ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ವಿಶ್ವ ಆರ್ಥಿಕ ವೇದಿಕೆಯ (WEF) ಸಮಾವೇಶದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದಾವೋಸ್ಗೆ ತೆರಳಿರುವುದು ಹಾಗೂ ಮೇಯರ್ ಹುದ್ದೆಗೆ ಮೀಸಲಾತಿ ಡ್ರಾ ನಡೆಯಬೇಕಿರುವ ಹಿನ್ನೆಲೆಯಲ್ಲಿ, ಹುದ್ದೆ ಕುರಿತು ನಡೆಯುತ್ತಿದ್ದ ಚರ್ಚೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮೇಯರ್ ಆಯ್ಕೆ ಕಸರತ್ತು ಈ ತಿಂಗಳ ಅಂತ್ಯದವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಜನವರಿ 22ರಂದು ಮೀಸಲಾತಿ ಡ್ರಾ ನಡೆಯಲಿದೆ ಎಂದು ತಿಳಿದುಬಂದಿದೆ. ವರ್ಗ ನಿಗದಿಯಾದ ಬಳಿಕ ಅದೇ ದಿನ ಅಧಿಸೂಚನೆ ಹೊರಡಿಸಲಾಗುತ್ತದೆ. ಮೇಯರ್ ಚುನಾವಣೆಗೆ ಕನಿಷ್ಠ ಏಳು ದಿನಗಳ ನೋಟಿಸ್ ಅಗತ್ಯವಿದೆ. ಜನವರಿ 22ರಂದು ಅಧಿಸೂಚನೆ ಪ್ರಕಟವಾದಲ್ಲಿ, ಮೇಯರ್ ಚುನಾವಣೆ ಜನವರಿ 29 ಅಥವಾ 30ರಂದು ನಡೆಯುವ ಸಾಧ್ಯತೆ ಇದೆ. ಜನವರಿ 23ರಂದು ಅಧಿಸೂಚನೆ ಹೊರಡಿಸಿದರೆ, ಜನವರಿ 30 ಅಥವಾ 31ರಂದು ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಫಡ್ನವೀಸ್ ಈ ತಿಂಗಳ 24ರಂದು ದಾವೋಸ್ ನಿಂದ ಮರಳಲಿದ್ದು, ಶಿಂಧೆ ಹಾಗೂ ಇತರ ಮುಖಂಡರು ಮೇಯರ್ ಹುದ್ದೆ ನಿರ್ಧರಿಸಲಿದ್ದಾರೆ ಎಂದು ಈ ಮೊದಲು ಫಡ್ನವೀಸ್ ಹೇಳಿಕೆ ನೀಡಿದ್ದರು. ಆದರೆ ಶಿವಸೇನೆಯ ಮೇಯರ್ ಆಗಬೇಕು ಎನ್ನುವುದು ದೇವರ ಇಚ್ಛೆ ಎಂದು ಶಿವಸೇನೆ (ಯುಬಿಟಿ) ವಕ್ತಾರ ಸಂಜಯ್ ರಾವುತ್ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಫಡ್ನವೀಸ್, ರಾವುತ್ ಅವರನ್ನು 'ದೇವಭಾವು' ಎಂದು ಕರೆಯಲ್ಪಡುವುದರಿಂದ ಅವರು ದೇವರ ಬಗ್ಗೆ ಉಲ್ಲೇಖಿಸುತ್ತಿದ್ದಾರೆಯೇ ಅಥವಾ ತಮ್ಮ ಬಗ್ಗೆಯೇ ಉಲ್ಲೇಖಿಸಿದ್ದಾರೆಯೇ ಎನ್ನುವುದು ತಿಳಿಯದು ಎಂದು ವ್ಯಂಗ್ಯವಾಡಿದ್ದರು.







