ಜಾಮಿಯಾ ವಿವಿ ಕ್ಯಾಂಪಸ್ ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ 'ಜೈ ಶ್ರೀರಾಮ್' ಘೋಷಣೆ: ಘರ್ಷಣೆ

Photo credit: maktoobmedia.com
ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ(JMI) ವಿವಿ ಆವರಣದಲ್ಲಿ ಮಂಗಳವಾರ ಎಬಿವಿಪಿ ಆಯೋಜಿಸಿದ್ದ ದೀಪಾವಳಿ ಆಚರಣೆ ವೇಳೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ 'ಜೈ ಶ್ರೀರಾಮ್' ಘೋಷಣೆ ಕೂಗಿದ್ದು, ಇದು ಘರ್ಷಣೆಗೆ ಕಾರಣವಾಗಿದೆ.
ಎಬಿವಿಪಿ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮುಸ್ಲಿಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದ್ದು, ಆ ಬಳಿಕ ಗಲಾಟೆ ನಡೆದಿದೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಘಟನೆಯನ್ನು ಎನ್ ಎಸ್ ಯುಐ (NSUI) ಖಂಡಿಸಿದೆ. ಕ್ಯಾಂಪಸ್ ನಲ್ಲಿನ ಅಶಾಂತಿಗೆ ಎಬಿವಿಪಿ ನಾಯಕರನ್ನು ದೂಷಿಸಿದ್ದು, ವಿವಿ ಆವರಣದಲ್ಲಿ ಎಬಿವಿಪಿಯ ಗೂಂಡಾ ಸಂಸ್ಕೃತಿಯನ್ನು ಕೊನೆಗೊಳಿಸುವಂತೆ ಆಗ್ರಹಿಸಿದೆ.
ಎಸ್ಎಫ್ಐ(SFI) ಜೆಎಂಐ(JMI) ಘಟನೆಯನ್ನು ಖಂಡಿಸಿದ್ದು, ಎಬಿವಿಪಿ ಸಂಯೋಜಿತ ಸಂಘಟನೆ ರಾಷ್ಟ್ರೀಯ ಕಲಾ ಮಂಚ್ ವಿವಿ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಎಬಿವಿಪಿಯ ಪ್ರಮುಖ ನಾಯಕರು ಸೇರಿದಂತೆ ಹೊರಗಿನ ವ್ಯಕ್ತಿಗಳನ್ನು ಕರೆತರಲಾಗಿದೆ. ಅವರು ಪರಿಸ್ಥಿತಿ ಹದಗೆಡಲು ಕಾರಣರಾಗಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕೋಮು ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಲಾಗಿದೆ. ಇದು ಹಿಂಸಾತ್ಮಕ ಘರ್ಷಣೆಗೆ ಕಾರಣವಾಗಿದೆ. ಲಾಠಿ ಚಾರ್ಜ್ ನಿಂದ ವಿದ್ಯಾರ್ಥಿಗಳಿಗೆ ಗಾಯವಾಗಿದ್ದು, ದುಷ್ಕರ್ಮಿಗಳು ಯಾವುದೇ ಸಮಸ್ಯೆಯಿಲ್ಲದೆ ಕ್ಯಾಂಪಸ್ ನಿಂದ ನಿರ್ಗಮಿಸಿದ್ದಾರೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿ ಸಂಘಟನೆ ಫ್ರಟರ್ನಿಟಿ ಮೂವ್ಮೆಂಟ್(Fraternity Movement) ಕೂಡ ಘಟನೆಯನ್ನು ಖಂಡಿಸಿದ್ದು, ವಿವಿ ಆಡಳಿತವು ಈ ವ್ಯಕ್ತಿಗಳಿಗೆ ವಿದ್ಯಾರ್ಥಿಗಳನ್ನು ಬೆದರಿಸಲು ಮತ್ತು ಕೋಮುವಾದಿ ಕಾರ್ಯಸೂಚಿಗಳನ್ನು ಉತ್ತೇಜಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದೆ.







