ಖಾಲಿಸ್ತಾನಿ ಭಯೋತ್ಪಾದಕರಿಗೆ ಸೇರಿದ 48 ಸ್ಥಳಗಳಲ್ಲಿ ಪಂಜಾಬ್ ಪೊಲೀಸರಿಂದ ಶೋಧ ಕಾರ್ಯಾಚರಣೆ

ಸಾಂದರ್ಭಿಕ ಚಿತ್ರ.| Photo: PTI
ಫಿರೋಝ್ಪುರ: ಖಾಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಲಂಡ ಮತ್ತು ಅವನ ಸಂಗಡಿಗರಿಗೆ ಸೇರಿದ ಹಲವಾರು ಸ್ಥಳಗಳಲ್ಲಿ ಪಂಜಾಬ್ ಪೊಲೀಸರು ಸೋಮವಾರ ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಫಿರೋಝ್ಪುರ ಮತ್ತು ಸಮೀಪದ 48 ಸ್ಥಳಗಳಲ್ಲಿ ಖಾಲಿಸ್ತಾನಿ ಪರ ಶಕ್ತಿಗಳ ವಿರುದ್ಧ ಬೃಹತ್ ದಮನ ಕಾರ್ಯಾಚರಣೆ ನಡೆಯಿತು.
ಇದಕ್ಕೂ ಮೊದಲು, ಫಿರೋಝ್ಪುರದ ಜೀರ ಎಂಬ ಸ್ಥಳದಲ್ಲಿ ಲಂಡ ಮತ್ತು ಅವನ ತಂಡದ ಸದಸ್ಯರು ಹಫ್ತಾ ವಸೂಲಿಯಲ್ಲಿ ತೊಡಗಿದ್ದರೆಂದು ವರದಿಯಾಗಿತ್ತು. ಅಲ್ಲಿ ಇಬ್ಬರು ಮುಸುಕುಧಾರಿಗಳು ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದ್ದರು.
ಇತ್ತೀಚೆಗೆ ಲಂಡ, ಹರ್ವಿಂದರ್ ಸಿಂಗ್ ಸಂದು ಯಾನೆ ರಿಂಡ ಮತ್ತು ನಿಷೇಧಿತ ಖಾಲಿಸ್ತಾನಿ ಗುಂಪು ಬಬ್ಬರ್ ಖಾಲ್ಸ ಇಂಟರ್ನ್ಯಾಶನಲ್ ನ ಇತರ ಮೂವರು ಕಾರ್ಯಕರ್ತರ ಬಂಧನಕ್ಕೆ ನೆರವಾಗುವ ಮಾಹಿತಿಗಳನ್ನು ನೀಡಿದವರಿಗೆ ನಗದು ಬಹುಮಾನಗಳನ್ನು ಘೋಷಿಸಲಾಗಿತ್ತು. ಲಂಡ ಮತ್ತು ರಿಂಡ ತಲೆಗೆ ತಲಾ 10 ಲಕ್ಷ ರೂ. ಬಹುಮಾನ ಘೋಷಿಸಿದರೆ, ಪರ್ಮಿಂದರ್ ಸಿಂಗ್ ಕೈರ ಯಾನೆ ಪಟ್ಟು, ಸತ್ನಮ್ ಸಿಂಗ್ ಯಾನೆ ಸತ್ಬೀರ್ ಸಿಂಗ್ ಯಾನೆ ಸಟ್ಟ ಮತ್ತು ಯದ್ವಿಂದರ್ ಸಿಂಗ್ ಯಾನೆ ಯದ್ದರ ತಲೆಗಳಿಗೆ ತಲ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.







