ಪ್ರಣವ್ ಅದಾನಿಯಿಂದ ಶೇರು ಮಾರುಕಟ್ಟೆ ಮಾಹಿತಿ ಸೋರಿಕೆ: ಸೆಬಿ ಆರೋಪ

SEBI | PTI
ಹೊಸದಿಲ್ಲಿ: ಭಾರತದ ಉದ್ಯಮ ದಿಗ್ಗಜ ಗೌತಮ್ ಅದಾನಿ ಅವರ ಸಂಬಂಧಿ, ಅದಾನಿ ಗ್ರೂಪ್ನ ನಿರ್ದೇಶಕ ಪ್ರಣವ್ ಅದಾನಿ ಅವರು ಶೇರು ದರಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ತನ್ನ ಸಂಬಂಧಿಕರ ಜೊತೆ ಹಂಚಿಕೊಳ್ಳುವ ಮೂಲಕ ‘ಇನ್ಸೈಡರ್ ಟ್ರೇಡಿಂಗ್’ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಶೇರುಮಾರುಕಟ್ಟೆ ನಿಯಂತ್ರಕ ಸಂಸ್ಥೆ ‘ಸೆಬಿ’ ಗಂಭೀರ ಆರೋಪ ಮಾಡಿದೆ.
ಎಸ್ಬಿ ಎನರ್ಜಿ ಇಂಡಿಯಾ ಸಂಸ್ಥೆಯನ್ನು 2021ರಲ್ಲಿ ‘ಅದಾನಿ ಗ್ರೀನ್’ ಸ್ವಾಧೀನಪಡಿಸಿಕೊಳ್ಳುವ ಒಪ್ಪಂದವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಮುನ್ನವೇ ಪ್ರಣವ್ ಅದಾನಿ ಅವರು, ಆ ವಿಷಯವನ್ನು ತನ್ನ ಭಾವ ಕುನಾಲ್ ಶಾ ಅವರ ಜೊತೆ ಹಂಚಿಕೊಂಡಿದ್ದರು ಎಂದು ಸೆಬಿ ಆಪಾದಿಸಿದೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಣವ್ ಅವರು ತಾನು ಯಾವುದೇ ಶೇರು ವ್ಯವಹಾರದ ನಿಯಮಗಳನ್ನು ಉಲ್ಲಂಘಿಸಿಲ್ಲವೆಂದು ಹೇಳಿದ್ದಾರೆ.
ಕುನಾಲ್ ಶಾ ಹಾಗೂ ಆತನ ಸಹೋದರ ನೃಪಾಲ್ ಶಾ ಅವರು ಆದಾನಿ ಗ್ರೀನ್ಸಂಸ್ಥೆ ಶೇರುಗಳ ಟ್ರೇಡಿಂಗ್ನಿಂದ 91.1 ಲಕ್ಷ ರೂ.ಗಳನ್ನು ಅಕ್ರಮವಾಗಿ ಸಂಪಾದಿಸಿದ್ದಾರೆಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯ್ಟರ್ಸ್ , ಸೆಬಿಯ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಸೆಬಿಯು ತನಿಖೆಯ ವೇಳೆ ಕರೆಗಳ ದಾಖಲೆಗಳನ್ನು ಹಾಗೂ ಶೇರು ವಿಕ್ರಯದ ಕುರಿತು ತನಿಖೆಗಳನ್ನು ನಡೆಸಿರುವುದಾಗಿ ವರದಿ ತಿಳಿಸಿದೆ.
ಆದರೆ ತಾವು ಎಸ್ಬಿ ಎನರ್ಜಿ ಇಂಡಿಯಾದ ಶೇರುಗಳನ್ನು ತಾವು ಯಾವುದೇ ವಿಶೇಷ ಮಾಹಿತಿಯಿಲ್ಲದೆ ಖರೀದಿಸಿದ್ದಾಗಿ ಕುನಾಲ್ ಶಾ ಹಾಗೂ ನೃಪಾಲ್ ಶಾ ಹೇಳಿದ್ದಾರೆ. ಅಲ್ಲದೆ ಎಸ್ಬಿ ಎನರ್ಜಿ ಇಂಡಿಯಾ ಸಂಸ್ಥೆಯನ್ನು ಅದಾನಿ ಗ್ರೀನ್ ಖರೀದಿಸುವ ಕುರಿತ ಮಾಹಿತಿಯು ಆಗಲೇ ಸಾರ್ವಜನಿಕ ವಲಯದಲ್ಲಿ ಲಭ್ಯವಿತ್ತೆಂದು ಅವರು ಹೇಳಿದ್ದಾರೆ.
2021ರ ಮೇ 17ರಂದು ಈ ಖರೀದಿ ಒಪ್ಪಂದವು ಅಂತಿಮಗೊಳ್ಳುವುದಕ್ಕೆ 2-3 ದಿನ ಮುಂಚಿತವಾಗಿಯೇ ಪ್ರಣವ್ ಅದಾನಿಗೆ ಮಾಹಿತಿಯಿತ್ತು. ಇದರಿಂದಾಗಿ ಅವರು ತನ್ನ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಸಂಬಂಧಿಗಳಾದ ಶಾ ಸಹೋದರರಿಗೆ ಮಾಹಿತಿ ನೀಡಿದ್ದರು. ಅದರಂತೆ ಶಾ ಸಹೋದರರು ಎಸ್ಬಿ ಎನರ್ಜಿ ಇಂಡಿಯಾದ ಶೇರುಗಳನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿ ಲಾಭಗಳಿಸಿದ್ದಾರೆಂದು ಸೆಬಿ ಆರೋಪಿಸಿದೆ.
ಎಸ್ಬಿ ಎನರ್ಜಿ ಇಂಡಿಯಾ ಲಿಮಿಟೆಡ್ ಸಂಸ್ಥೆಯನ್ನು ಅದಾನಿ ಗ್ರೀನ್ ಕಂಪೆನಿಯು 29,500 ಕೋಟಿ ರೂ.ಗೆ ಖರೀದಿಸಿತ್ತು.







