ಏರ್ ಇಂಡಿಯಾ ವಿಮಾನ ಅಪಘಾತವಾದ ಸ್ಥಳದಿಂದ ಎರಡನೇ ಬ್ಲ್ಯಾಕ್ ಬಾಕ್ಸ್ ಪತ್ತೆ

Photo credit: PTI
ಹೊಸದಿಲ್ಲಿ: ಏರ್ ಇಂಡಿಯಾ ವಿಮಾನ ಅಪಘಾತವಾದ ಸ್ಥಳದಲ್ಲಿ ಎರಡನೇ ಬ್ಲ್ಯಾಕ್ ಬಾಕ್ಸ್, ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (CVR) ಪತ್ತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎರಡನೇ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿರುವುದರಿಂದ ತನಿಖಾಧಿಕಾರಿಗಳು ಅಪಘಾತಕ್ಕೆ ನಿಖರ ಕಾರಣಗಳನ್ನು ತಿಳಿಯಬಹುದು. ಇದು ಕಾಕ್ಪಿಟ್ ಮತ್ತು ವಿಮಾನದಲ್ಲಿ ಏನಾಯಿತು ಎಂಬುದರ ಅತ್ಯಂತ ವಸ್ತುನಿಷ್ಠ ವಿವರವನ್ನು ನೀಡಲಿದೆ.
ಪತ್ತೆಯಾಗಿರುವ ಎರಡನೇ ಬ್ಲ್ಯಾಕ್ ಬಾಕ್ಸ್ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (CVR) ಆಗಿದ್ದು, ಇದು ಕಾಕ್ಪಿಟ್ ನಲ್ಲಿ ಪೈಲಟ್ ಗಳ ನಡುವಿನ ಸಂಭಾಷಣೆಗಳು, ರೇಡಿಯೋ, ಎಚ್ಚರಿಕೆಗಳು ಮತ್ತು ಆ ಸಂದರ್ಭದ ಯಾಂತ್ರಿಕ ಶಬ್ದಗಳನ್ನು ರೆಕಾರ್ಡ್ ಮಾಡುತ್ತದೆ. ಅಪಘಾತವಾಗುವ ಮೊದಲು ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಈ ಬ್ಲ್ಯಾಕ್ ಬಾಕ್ಸ್ ಮಾಹಿತಿ ನೀಡಲಿದೆ.
ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ AI-171 ಅಪಘಾತದ ಸ್ಥಳದಲ್ಲಿರುವ ಕಟ್ಟಡದ ಮೇಲ್ಛಾವಣಿಯಿಂದ ಶುಕ್ರವಾರ ಮೊದಲ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿತ್ತು.





