ರಾಷ್ಟ್ರೀಯ ವೃತ್ತಿ ಸೇವೆ ಪೋರ್ಟಲ್ ನ ಎರಡನೇ ಆವೃತ್ತಿಗೆ 2024ರಲ್ಲಿ ಚಾಲನೆ
ಹೊಸದಿಲ್ಲಿ: ಸರಕಾರವು 2024ರಲ್ಲಿ ರಾಷ್ಟ್ರೀಯ ವೃತ್ತಿ ಸೇವೆ (ಎನ್ಸಿಎಸ್) ಪೋರ್ಟಲ್ ನ ಎರಡನೇ ಆವೃತ್ತಿಗೆ ಚಾಲನೆ ನೀಡಲಿದೆ ಹಾಗೂ ವ್ಯವಹಾರ ಸುಗಮತೆಯನ್ನು ಇನ್ನಷ್ಟು ಹೆಚ್ಚಿಸುವ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಪ್ರಯತ್ನಗಳ ಅಂಗವಾಗಿ ಕಾರ್ಮಿಕ ಸುಧಾರಣೆಗಳನ್ನು ಜಾರಿಗೊಳಿಸುವಂತೆ ರಾಜ್ಯಗಳ ಮನವೊಲಿಸಲಿದೆ.
ಶನಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ ಅವರು, ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಹುಡುಕಾಟವನ್ನು ಸುಲಭಗೊಳಿಸಲು ಶೀಘ್ರವೇ ಎನ್ಸಿಎಸ್ 2.0 ನೂತನ ಆವೃತ್ತಿಗೆ ಚಾಲನೆ ನೀಡಲಾಗುವುದು ಮತ್ತು ಇತ್ತೀಚಿನ ತಂತ್ರಜ್ಞಾನಗಳು ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ಬಳಸಿಕೊಂಡು ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ʼರೆಕಮಂಡೇಷನ್ ಇಂಜಿನ್ʼ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಡಿಜಿಟಲ್ ವೇದಿಕೆಯ ಮೂಲಕ ವೃತ್ತಿ ಸಲಹೆ, ವೃತ್ತಿಪರ ಮಾರ್ಗದರ್ಶನ, ಕೌಶಲ್ಯಾಭಿವೃದ್ಧಿ ಕೋರ್ಸ್ಗಳು, ಅಪ್ರೆಂಟಿಸ್ಶಿಪ್ ಮತ್ತು ಇಂಟರ್ನ್ಶಿಪ್ ಗಳ ಕುರಿತು ಮಾಹಿತಿ ಸೇರಿದಂತೆ ವಿವಿಧ ಉದ್ಯೋಗ ಸಂಬಂಧಿ ಸೇವೆಗಳನ್ನು ಒದಗಿಸಲು ಎನ್ಎಸ್ಸಿ ಯೋಜನೆಯನ್ನು ಜುಲೈ, 2015ರಲ್ಲಿ ಆರಂಭಿಸಲಾಗಿತ್ತು.
ಈ ವರ್ಷದ ನ.30ಕ್ಕೆ ಇದ್ದಂತೆ ಎನ್ಸಿಎಸ್ ಪೋರ್ಟಲ್ 3.64 ಕೋ.ಗೂ ಅಧಿಕ ಉದ್ಯೋಗಾಕಾಂಕ್ಷಿಗಳು,19.15 ಲಕ್ಷ ಉದ್ಯೋಗದಾತರು ಮತ್ತು 1.92 ಕೋಟಿ ಗೂ ಅಧಿಕ ಖಾಲಿಹುದ್ದೆಗಳ ಪಟ್ಟಿಗಳನ್ನು ಹೊಂದಿತ್ತು. ಪೋರ್ಟಲ್ ನವಂಬರ್ ನಲ್ಲಿ 13.49 ಲಕ್ಷಕ್ಕೂ ಅಧಿಕ ಸಕ್ರಿಯ ಖಾಲಿ ಹುದ್ದೆಗಳನ್ನು ನೋಂದಾಯಿಸಿಕೊಂಡಿದೆ.
ಸಮಗ್ರ ಪಾನ್ ಇಂಡಿಯಾ ನೆಟ್ವರ್ಕ್ ಅನ್ನು ಅಭಿವೃದ್ಧಿಗೊಳಿಸಲು ಪೋರ್ಟಲ್ ಅನ್ನು 28 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸೌಲಭ್ಯಗಳೊಂದಿಗೆ ಏಕೀಕರಿಸಲಾಗಿದೆ. ಮಾನ್ಸ್ಟರ್ ಡಾಟ್ ಕಾಮ್, ಫ್ರೆಷರ್ಸ್ವರ್ಲ್ಡ್ ಮತ್ತು ಹೈರ್ಮೀನಂತಹ ವಿವಿಧ ಖಾಸಗಿ ಪೋರ್ಟಲ್ ಗಳೊಂದಿಗೂ ಅದನ್ನು ಸಂಯೋಜಿಲಾಗಿದೆ.
ಎನ್ಸಿಎಸ್ ಪೋರ್ಟಲ್ ಸರಕಾರದ ಸ್ಕಿಲ್ ಇಂಡಿಯಾ ಪೋರ್ಟಲ್, ಉದ್ಯಮ ಪೋರ್ಟಲ್ (ಎಂಎಸ್ಎಂಇ),ಇ-ಶ್ರಮ,ಇಪಿಎಫ್ಒ, ಇಎಸ್ಐಸಿ ಮತ್ತು ಡಿಜಿಲಾಕರ್ ಇತ್ಯಾದಿಗಳೊಂದಿಗೂ ಸಂಪರ್ಕವನ್ನು ಹೊಂದಿದೆ.
ಕಾರ್ಮಿಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸಚಿವ ಯಾದವ ಅವರು, 2024ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವ ನಿಟ್ಟಿನಲ್ಲಿ ಭಾರತದ ಪಯಣವು ಮುಂದುವರಿಯಲಿದೆ,ಹೀಗಾಗಿ ಕೇಂದ್ರವು ಪರಿಚಯಿಸಿರುವ ಕಾರ್ಮಿಕ ಸುಧಾರಣೆಗಳನ್ನು ರಾಜ್ಯಗಳು ಜಾರಿಗೊಳಿಸುತ್ತವೆ ಎಂದು ಆಶಿಸಿದ್ದೇನೆ. ಇದರಿಂದಾಗಿ ಅಮೃತ ಕಾಲದ ಭಾರತವು ದೇಶದ ಬೆಳವಣಿಗೆಗೆ ಕೊಡುಗೆಯನ್ನು ನೀಡುವ ಮತ್ತು ಇದೇ ವೇಳೆ ಅದರಿಂದ ಲಾಭವನ್ನು ಪಡೆದುಕೊಳ್ಳುವ ಆರೋಗ್ಯಕರ ಮತ್ತು ಸಾಮಾಜಿಕವಾಗಿ ಸುಭದ್ರ ಕಾರ್ಯಪಡೆಯನ್ನು ಹೊಂದಲು ಸಾಧ್ಯವಾಗುತ್ತದೆ ಮತ್ತು ದೇಶದಲ್ಲಿ ವ್ಯವಹಾರ ಸುಗಮತೆಯನ್ನು ದೃಢಪಡಿಸುವುದನ್ನು ನಾವು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು