ನಾಳೆ ಎರಡನೇ ಟ್ವೆಂಟಿ-20: ವಿರಾಟ್ ಕೊಹ್ಲಿ ವಾಪಸ್
ಟೀಮ್ ಇಂಡಿಯಾಕ್ಕೆ ಅಫ್ಘಾನಿಸ್ತಾನ ವಿರುದ್ಧ ಸರಣಿ ಗೆಲ್ಲುವ ತವಕ
ವಿರಾಟ್ ಕೊಹ್ಲಿ | Photo: PTI
ಹೊಸದಿಲ್ಲಿ : ಇಂದೋರ್ ನಲ್ಲಿ ರವಿವಾರ ನಡೆಯಲಿರುವ ಎರಡನೇ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಸರಣಿ ಗೆಲ್ಲುವ ತವಕದಲ್ಲಿದೆ. ಆದರೆ ಅಫ್ಘಾನ್ ವಿರುದ್ಧ ಸರಣಿ ಗೆಲುವು ರೋಹಿತ್ ಶರ್ಮಾ ಬಳಗದ ದೊಡ್ಡ ಸಾಧನೆ ಎಂದು ಪರಿಗಣಿಸಲ್ಪಡದಿದ್ದರೂ ಕೆಲವು ಆಟಗಾರರಿಗೆ ತಮ್ಮ ಸ್ಥಾನಗಳಲ್ಲಿ ಪ್ರಬಲ ಸ್ಪರ್ಧಿಗಳಾಗಿ ಭಡ್ತಿ ಪಡೆಯುವ ಅಪೂರ್ವ ಅವಕಾಶವನ್ನು ಈ ಪಂದ್ಯ ಒದಗಿಸಿಕೊಡಲಿದೆ.
ಮೊಹಾಲಿಯಲ್ಲಿ ನಡೆದಿದ್ದ ಮೊದಲ ಟಿ-20 ಪಂದ್ಯದಲ್ಲಿ ಆರು ವಿಕೆಟ್ ಗಳಿಂದ ಜಯ ಸಾಧಿಸಿರುವ ಭಾರತ ಸದ್ಯ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಭಾರತ ಇನ್ನೊಂದು ಪಂದ್ಯ ಜಯಿಸಿ ಪ್ರಾಬಲ್ಯ ಸಾಧಿಸಲು ಎದುರು ನೋಡುತ್ತಿದೆ.
ಜಿತೇಶ್ ಶರ್ಮಾ, ವಾಶಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ರಂತಹ ಆಟಗಾರರಿಗೆ ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದು ನಿರ್ಣಾಯಕವಾಗಿದೆ. ಇದು ತಂಡದ ಯಶಸ್ಸಿಗೆ ಕಾಣಿಕೆ ನೀಡುವುದು ಮಾತ್ರವಲ್ಲ, ಟಿ-20 ವಿಶ್ವಕಪ್ ಗಿಂತತ ಮೊದಲು ಆಯ್ಕೆಗಾರರ ಪರಿಗಣನೆಗೂ ನೆರವಾಗಲಿದೆ.
ಜೂನ್ ನಲ್ಲಿ ನಿಗದಿಯಾಗಿರುವ ಪ್ರತಿಷ್ಠಿತ ಟ್ವೆಂಟಿ-20 ವಿಶ್ವಕಪ್ ಟೂರ್ನಿಗಿಂತ ಮೊದಲ ಭಾರತವು ಯಾವುದೇ ಟಿ-20 ಸರಣಿಯನ್ನು ಆಡುವುದಿಲ್ಲ. ಹೀಗಾಗಿ ಪ್ರತಿ ಆಟಗಾರರಿಗೆ ಆಯ್ಕೆಗಾರರ ಮೇಲೆ ಪ್ರಭಾವಬೀರಲು ಈ ಸರಣಿಯು ಅತ್ಯಂತ ಮುಖ್ಯವಾಗಿದೆ.
ಕಳೆದ ವರ್ಷ ರಾಯ್ಪುರದಲ್ಲಿ ನಡೆದಿದ್ದ ಆಸ್ಟ್ರೇಲಿಯ ವಿರುದ್ಧ ನಾಲ್ಕನೇ ಟ್ವೆಂಟಿ-20 ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಜಿತೇಶ್ ಶರ್ಮಾ ಅವರು ಇಶಾನ್ ಕಿಶನ್ ರನ್ನು ಹಿಂದಿಕ್ಕಿ ವಿಕೆಟ್ಕೀಪರ್-ಬ್ಯಾಟರ್ ಆಗಿ ಗಮನ ಸೆಳೆಯುವ ಸ್ಫರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಕೆಳ ಸರದಿಯಲ್ಲಿ ಹಲವು ಬಾರಿ 30 ರನ್ ಗಳಿಸಿರುವ ಮಹಾರಾಷ್ಟ್ರದ ಕ್ರಿಕೆಟಿಗ ಜಿತೇಶ್ ಶರ್ಮಾ ಆಡುವ 11ರ ಬಳಗದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಇನ್ನಷ್ಟು ಬಲಿಷ್ಠ ಇನಿಂಗ್ಸ್ ಆಡುವ ಅಗತ್ಯವಿದೆ ಎಂಬ ಅರಿವು ಹೊಂದಿದ್ದಾರೆ. ಭಾರತೀಯ ಕ್ರಿಕೆಟ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಮಾತ್ರ ಸ್ಫರ್ಧೆಯಲ್ಲಿ ಮುಂದಿರಬಹುದೆಂಬ ವಿಚಾರ 30ರ ಹರೆಯದ ಜಿತೇಶ್ ತಿಳಿದಿದೆ.
ಎಡಗೈ ಬ್ಯಾಟರ್ ತಿಲಕ್ ವರ್ಮಾ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ತಿಲಕ್ ಕಳೆದ ವರ್ಷ ಟ್ವೆಂಟಿ-20 ವೃತ್ತಿಜೀವನ ಆರಂಭಿಸಿದ ನಂತರ ವೆಸ್ಟ್ಇಂಡೀಸ್ ವಿರುದ್ದ ವಿದೇಶಿ ಸರಣಿಯಲ್ಲಿ 39, 51 ಹಾಗೂ ಔಟಾಗದೆ 49 ರನ್ ಗಳಿಸಿದ್ದರು.
ಆದರೆ ಆ ನಂತರ 13 ಇನಿಂಗ್ಸ್ ಗಳಲ್ಲಿ ಒಮ್ಮೆ ಮಾತ್ರ ಏಶ್ಯನ್ ಗೇಮ್ಸ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಗಳಿಸಿದ್ದಾರೆ. ಉಳಿದಿರುವ ಪಂದ್ಯಗಳಲ್ಲಿ ಮೂರು ಬಾರಿ 20 ಪ್ಲಸ್ ಹಾಗೂ ಒಂದು ಬಾರಿ 30 ಪ್ಲಸ್ ಸ್ಕೋರ್ ಗಳಿಸಿದ್ದಾರೆ.
ಮೊದಲ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2ನೇ ಪಂದ್ಯಕ್ಕೆ ಲಭ್ಯವಿರುವ ಹಿನ್ನೆಲೆಯಲ್ಲಿ ತಿಲಕ್ ವರ್ಮಾ ಆಡುವ ಬಳಗದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ಗಾಯದ ಸಮಸ್ಯೆಯಿಂದಾಗಿ 50 ಓವರ್ ವಿಶ್ವಕಪ್ನಿಂದ ವಂಚಿತರಾಗಿದ್ದ ಅಕ್ಷರ್ ಪಟೇಲ್ ಇದೀಗ ಟೆಸ್ಟ್ ಹಾಗೂ ಸೀಮಿತ ಓವರ್ ಕ್ರಿಕೆಟ್ಗೆ ವಾಪಸಾಗಿದ್ದಾರೆ. ಎಡಗೈ ಸ್ಪಿನ್ನರ್ ಪಟೇಲ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಪಟೇಲ್ ಗುರುವಾರ ನಡೆದ ಮೊದಲ ಟಿ-20ಯಲ್ಲಿ 23 ರನ್ಗೆ 2 ವಿಕೆಟ್ ಪಡೆದಿದ್ದರು.
ತಂಡದಲ್ಲಿ ಮತ್ತೆ ಸ್ಥಾನ ಪಡೆದಿರುವ ಸುಂದರ್ 2ನೇ ಪಂದ್ಯದಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಅಫ್ಘಾನಿಸ್ತಾನ ತಂಡವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಯುವ ಆಟಗಾರ ರಹಮಾನುಲ್ಲಾ ಗುರ್ಬಾಝ್, ಅಝ್ಮತುಲ್ಲಾ ಉಮರ್ಝೈ ಹಾಗೂ ಹಿರಿಯ ಆಟಗಾರ ಮುಹಮ್ಮದ್ ನಬಿ ಭಾರತಕ್ಕೆ ಸವಾಲಾಗಬಲ್ಲರು.
ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅನುಪಸ್ಥಿತಿಯಲ್ಲೂ ಅಫ್ಘಾನ್ ತಂಡದಲ್ಲಿ ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್ ಹಾಗೂ ಫಝಲ್ ಹಕ್ ಫಾರೂಕಿ ಇದ್ದಾರೆ. ರೆಹಮಾನ್ ಮೊದಲ ಪಂದ್ಯದಲ್ಲಿ ಉತ್ತಮ ಲಯದಲ್ಲಿ ಬೌಲಿಂಗ್ ಮಾಡಿದ್ದರು.
ಪಂದ್ಯ ಆರಂಭದ ಸಮಯ: ಸಂಜೆ 7:00