"ಅತೀಕ್ ಅಹ್ಮದ್, ಸೋದರನ ಹತ್ಯೆಗೆ ಕಾರಣವಾದ ಭದ್ರತಾ ಲೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ"
ಸುಪ್ರೀಂಕೋರ್ಟ್ಗೆ ತಿಳಿಸಿದ ಉತ್ತರಪ್ರದೇಶ ಸರ್ಕಾರ

Photo: PTI
ಹೊಸದಿಲ್ಲಿ: ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಗ್ಯಾಂಗ್ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಮತ್ತಾತನ ಸಹೋದರ ಅಶ್ರಫ್ ಅಹ್ಮದ್ ಅವರ ಹತ್ಯೆ ನಡೆಯಲು ಕಾರಣವಾದ ಭದ್ರತಾ ಲೋಪಗಳನ್ನು ತನಿಖೆ ನಡೆಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟಿಗೆ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಇಬ್ಬರನ್ನೂ ಪ್ರಯಾಗರಾಜ್ನ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯುತ್ತಿದ್ದಾಗ ಎಪ್ರಿಲ್ 15ರಂದು ಈ ಹತ್ಯೆ ನಡೆದಿತ್ತು. ಎಪ್ರಿಲ್ 13ರಂದು ಅತೀಕ್ ಅಹ್ಮದ್ನ 19 ವರ್ಷದ ಪುತ್ರ ಅಸದ್ ಅಹ್ಮದ್ನನ್ನು ಉತ್ತರ ಪ್ರದೇಶ ಪೊಲೀಸರೊಂದಿಗೆ ನಡೆದಿತ್ತೆನ್ನಲಾದ ಗುಂಡಿನ ಚಕಮಕಿಯಲ್ಲಿ ಹತ್ಯೆಗೈಯ್ಯಲಾಗಿತ್ತು.
ಈ ಘಟನೆ ಕುರಿತು ಉತ್ತರ ಪ್ರದೇಶದಿಂದ ವಿಸ್ತೃತ ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್ ಕೇಳಿತ್ತು. ಹತ್ಯೆಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ಕೋರಿ ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಮೇಲಿನ ಸೂಚನೆ ನೀಡಿದೆ.
ಘಟನೆ ಕುರಿತು ತನಿಖೆಗೆ ತ್ರಿಸದಸ್ಯರ ಆಯೋಗ ರಚಿಸಲಾಗಿದೆ ಹಾಗೂ ನಂತರ ಈ ಆಯೋಗದ ಸದಸ್ಯರ ಸಂಖ್ಯೆಯನ್ನು ಐದಕ್ಕೆ ಏರಿಸಲಾಗಿದೆ ಹಾಗೂ ಅಲಹಾಬಾದ್ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ ಬಿ ಭೋಸ್ಲೆ ಈ ಆಯೋಗದ ನೇತೃತ್ವ ವಹಿಸಿದ್ದಾರೆ, ತನಿಖೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ ಹಾಗೂ ಸೆಪ್ಟೆಂಬರ್ 24 ರ ತನಕ ಅವಧಿ ವಿಸ್ತರಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿದೆ.
ಆಯಾ ಎಸಿಪಿಗಳಿಂದ ಬಂದ ವರದಿಗಳ ಆಧಾರದಲ್ಲಿ, ಘಟನೆ ಸಂದರ್ಭ ಹಾಜರಿದ್ದ ನಾಲ್ಕು ಪೊಲೀಸ್ ಅಧಿಕಾರಿಗಳು ಹಾಗೂ ಘಟನೆ ನಡೆದ ಪೊಲೀಸ್ ಠಾಣಾ ವ್ಯಾಪ್ತಿಯಾದ ಶಾಹಗಂಜ್ ಠಾಣೆಯ ಠಾಣಾಧಿಕಾರಿಯನ್ನು ವಜಾಗೊಳಿಸಲಾಗಿದೆ. ಎಡಿಜಿಪಿ ನೇತೃತ್ವದ ಎಸ್ಐಟಿ ಕೂಡ ತನಿಖೆ ನಡೆಸುತ್ತಿದೆ ಹಾಗೂ ಅತೀಕ್ ಪುತ್ರ ಅಸದ್ ಅಹ್ಮದ್ ಹಾಗೂ ಆತನ ಸಹವರ್ತಿ ಗುಲಾಂ ಹುಸೈನ್ ಸಾವು ಕುರಿತಂತೆ ತನಿಖೆಗೆ ವಿಶೇಷ ತನಿಖಾ ಆಯೋಗವನ್ನು ಎಪ್ರಿಲ್ 15ರಂದು ರಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಅತೀಕ್ ಸಹೋದರಿ ಆಯಿಶಾ ನೂರಿ ಸುಪ್ರೀಂ ಕೋರ್ಟ್ಗೆ ಅಪೀಲು ಸಲ್ಲಿಸಿ ತನ್ನ ಇಬ್ಬರು ಸಹೋದರರನ್ನು ಸರಕಾರವೇ ಹತ್ಯೆಗೈದಿದೆ ಎಂದು ಆರೋಪಿಸಿದ್ದರಲ್ಲದೆ ಸ್ವತಂತ್ರ ತನಿಖೆಗೂ ಕೋರಿದ್ದರು.







