ಕರೂರ್ ಕಾಲ್ತುಳಿತ: ನಟ ವಿಜಯ್ ನಿವಾಸದ ಸುತ್ತ ಬಿಗಿ ಭದ್ರತೆ

ನಟ ವಿಜಯ್ (Photo: PTI)
ಚೆನ್ನೈ: ಕರೂರ್ ನಲ್ಲಿ ತಮ್ಮ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 39 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ, ನಟ, ರಾಜಕಾರಣಿ ವಿಜಯ್ ನಿವಾಸದ ಸುತ್ತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಶನಿವಾರ ನಡೆದ ಕಾಲ್ತುಳಿತ ದುರಂತದಲ್ಲಿ 10 ಮಕ್ಕಳು, 16 ಮಹಿಳೆಯರು ಸೇರಿದಂತೆ ಒಟ್ಟು 39 ಮಂದಿ ಮೃತಪಟ್ಟಿದ್ದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆದಿರುವ ಅತ್ಯಂತ ಭೀಕರ ದುರಂತ ಇದೆಂದು ಬಣ್ಣಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದಲ್ಲಿ ನ್ಯಾಯಾಂಗ ಆಯೋಗದ ವಿಚಾರಣೆಗೆ ಆದೇಶಿಸಿದ್ದಾರೆ. ಪರಿಸ್ಥಿತಿಯ ಪರಾಮರ್ಶೆ ನಡೆಸಲು ಅವರು ಚೆನ್ನೈನಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದರು.
ಈ ಘಟನೆ ಶನಿವಾರ ಸಂಜೆ ಸುಮಾರು 7.30ಕ್ಕೆ ಸಂಭವಿಸಿದ್ದು, ಮಧ್ಯಾಹ್ನದಿಂದ ಕಾಯುತ್ತಿದ್ದ ಸಾವಿರಾರು ಮಂದಿ, ನಟ ವಿಜಯ್ ತಮ್ಮ ಪ್ರಚಾರ ವಾಹನದ ಮೇಲೆ ನಿಂತುಕೊಂಡು ಅವರನ್ನು ಉದ್ದೇಶಿಸಿ ಮಾತನಾಡತೊಡಗಿದಾಗ, ಅವರೆಲ್ಲ ಅವರತ್ತ ಧಾವಿಸಿದಾಗ ಈ ಕಾಲ್ತುಳಿತ ಸಂಭವಿಸಿದೆ. ತಮ್ಮ ಅಚ್ಚುಮೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಮಧ್ಯಾಹ್ನದಿಂದ ಬಿರು ಬಿಸಿಲಿನಲ್ಲಿ ಕಾಯುತ್ತಿದ್ದ ಹಲವಾರು ಮಂದಿ ಸೆಖೆ, ನಿರ್ಜಲೀಕರಣ ಹಾಗೂ ಉಸಿರಾಟದ ತೊಂದರೆಯಿಂದ ಪ್ರಜ್ಞಾಹೀನರಾಗಿ ಕುಸಿದು ಬಿದ್ದರು. ಈ ವೇಳೆ ಕೆಲ ಯುವಕರು ಗುಡಿಸಿಲಿನ ಒಳಗೆ ನುಗ್ಗಿ, ಚಾವಣಿಯ ಮೇಲೇರಿ ತಪ್ಪಿಸಿಕೊಳ್ಳುವ ಮಾರ್ಗವನ್ನು ಹುಡುಕುತ್ತಿರುವ ದೃಶ್ಯಗಳ ವಿಡಿಯೊ ವೈರಲ್ ಆಗಿದೆ.
ಮಾರ್ಗಮಧ್ಯದಲ್ಲೇ ತಮ್ಮ ಭಾಷಣವನ್ನು ಸ್ಥಗಿತಗೊಳಿಸಿದ ವಿಜಯ್, ನಂತರ ಎಕ್ಸ್ ನಲ್ಲಿ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದು, “ಈ ಘಟನೆಯಿಂದ ಹೃದಯ ಒಡೆದು ಹೋಗಿದೆ. ಸಹಿಸಲಾಗದ ವೇದನೆಯುಂಟಾಗಿದೆ” ಎಂದು ಖೇದ ವ್ಯಕ್ತಪಡಿಸಿದ್ದಾರೆ.







