ದಿಲ್ಲಿಯ ಆಶ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಸ್ವಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ ಪ್ರಕರಣ ದಾಖಲು

ಸ್ವಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ (Photo credit: indiatoday.in)
ಹೊಸದಿಲ್ಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆಶ್ರಮವೊಂದರ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ್ ಸಾರಥಿ ವಿರುದ್ಧ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 4 ರಂದು ದೂರು ದಾಖಲಾಗಿದೆ.
ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿಯಲ್ಲಿ ಓದುತ್ತಿದ್ದ 32 ಪಿಜಿಡಿಎಂ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿತ್ತು. ಇವರಲ್ಲಿ 17 ಮಂದಿ ಸರಸ್ವತಿ ಅಸಭ್ಯ ಭಾಷೆ ಬಳಸಿದ್ದಾನೆ, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ ಹಾಗೂ ದೈಹಿಕ ಕಿರುಕುಳ ನೀಡಿದ್ದಾನೆ ಎಂದು ದೂರಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸಂಸ್ಥೆಯ ಕೆಲ ಅಧ್ಯಾಪಕರು ಮತ್ತು ಆಡಳಿತಾಧಿಕಾರಿಗಳೂ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರಿರುವ ಬಗ್ಗೆ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆಯ ನಂತರ 16 ವಿದ್ಯಾರ್ಥಿನಿಯರನ್ನು ಮ್ಯಾಜಿಸ್ಟ್ರೇಟ್ ಮುಂದೆ ಸಾಕ್ಷ್ಯ ನೀಡಲು ಹಾಜರುಪಡಿಸಲಾಗಿದೆ.
ತನಿಖೆಯ ವೇಳೆ ಸಂಸ್ಥೆಯ ನೆಲಮಾಳಿಗೆಯಲ್ಲಿ ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್ (39 UN 1) ಹೊಂದಿದ್ದ ವೋಲ್ವೋ ಕಾರನ್ನು ಪತ್ತೆ ಹಚ್ಚಲಾಗಿದ್ದು, ಆಗಸ್ಟ್ 25ರಂದು ಈ ಸಂಬಂಧ ಮತ್ತೊಂದು ಎಫ್ಐಆರ್ ದಾಖಲಿಸಿ ವಾಹನ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಸರಸ್ವತಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.







