ಸಂದೇಶಖಾಲಿ ಹಿಂಸಾಚಾರ ಪ್ರಕರಣ: ಸತ್ಯಶೋಧನಾ ತಂಡದ ಸದಸ್ಯರ ಬಂಧನ; ಬಿಡುಗಡೆ

Photo credit: ANI
ಹೊಸದಿಲ್ಲಿ: ಪಶ್ಚಿಮಬಂಗಾಳದ ಉತ್ತರ 24 ಪರಗಣದ ಹಿಸಾಚಾರ ಪೀಡಿತ ಸಂದೇಶಖಾಲಿಗೆ ತೆರಳುತ್ತಿದ್ದ ಪಾಟ್ನಾ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್. ನರಸಿಂಹ ರೆಡ್ಡಿ ನೇತೃತ್ವದ ಸ್ವತಂತ್ರ್ಯ ಸತ್ಯ ಶೋಧನಾ ತಂಡದ 6 ಮಂದಿ ಸದಸ್ಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
‘‘ಇಲ್ಲಿಂದ (ಪಶ್ಚಿಮಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಭೋಜೆರ್ಹಾತ್) ದಾಟದಂತೆ ನಾವು ಅವರಲ್ಲಿ (ಸಮಿತಿ) ಮನವಿ ಮಾಡಿದ್ದೆವು. ಆದರೆ, ಅವರು ಕಾನೂನು ಬಾಹಿರವಾಗಿ ಪೊಲೀಸ್ ಬ್ಯಾರಿಕೇಡ್ಗಳನ್ನು ನಾಶಗೊಳಿಸಲು ಪ್ರಯತ್ನಿಸಿದರು. ಆದುದರಿಂದ ನಾವು ಸಂದೇಶಖಾಲಿಯ ಭಾಗದಲ್ಲಿ ಜಾರಿಯಲ್ಲಿರುವ ಸೆಕ್ಷನ್ 144 ಸಿಆರ್ಪಿಸಿ ಅಡಿಯಲ್ಲಿ ಅವರನ್ನು ಬಂಧಿಸಿದೆವು’’ ಎಂದು ಭಂಗಾರ್ ವಿಭಾಗದ ಜಿಲ್ಲಾಧಿಕಾರಿ ಸೈಕತ್ ಘೋಷ್ ತಿಳಿಸಿದ್ದಾರೆ.
ಈ ತಂಡದಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್. ನರಸಿಂಹ ರೆಡ್ಡಿ ಅಲ್ಲದೆ, ರಾಜ್ಪಾಲ್ ಸಿಂಗ್ (ನಿವೃತ್ತ ಐಪಿಎಸ್ ಅಧಿಕಾರಿ, ಹರ್ಯಾಣ ಕೇಡರ್), ಡಾ. ಚಾರು ವಾಲಿ ಖನ್ನಾ (ನ್ಯಾಯವಾದಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ), ಒ.ಪಿ. ವ್ಯಾಸ್ (ನ್ಯಾಯವಾದಿ ಹಾಗೂ ಎನ್ಎಚ್ಆರ್ಸಿಯ ಮಾಜಿ ರಿಜಿಸ್ಟ್ರಾರ್), ಸಂಜೀವ್ ನಾಯಕ್ (ಹಿರಿಯ ಪತ್ರಕರ್ತ) ಹಾಗೂ ಭಾವನಾ ಬಜಾಜ್ (ನ್ಯಾಯವಾದಿ, ಎನ್ಎಚ್ಆರ್ಸಿ ಹಾಗೂ ಎನ್ಸಿಪಿಸಿಆರ್ನ ಸಮಾಲೋಚಕ) ಇದ್ದರು.
ಈ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ಎಲ್. ನರಸಿಂಹ ರೆಡ್ಡಿ, ‘‘ನಮ್ಮನ್ನು ಸೆಕ್ಷನ್ 151 ಸಿಆರ್ಪಿಸಿ ಅಡಿಯಲ್ಲಿ ಬಂಧಿಸಲಾಯಿತು. ಅನಂತರ ಇಲ್ಲಿಗೆ ತರಲಾಯಿತು. ಜಾಮೀನು ನೀಡಿದ ಬಳಿಕ ಬಿಡುಗಡೆಗೊಳಿಸಲಾಯಿತು. ನಾವು ಏನನ್ನೂ ಮಾಡಿಲ್ಲ. ಆದರೂ ಅವರು ನಮ್ಮನ್ನು ಬಂಧಿಸಿದರು. ಇದು ಬಂಗಾಳದಲ್ಲಿ ಮಾತ್ರ ನಡೆಯುತ್ತದೆ. ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಇಡೀ ದೇಶ ನೋಡುತ್ತಿದೆ. ಅಪರಾಧಿಗಳು ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಸಂತ್ರಸ್ತರು ಒತ್ತಡಕ್ಕೆ ಒಳಗಾಗಿದ್ದಾರೆ’’ ಎಂದಿದ್ದಾರೆ.
ಪೊಲೀಸರು ಉದ್ದೇಶಪೂರ್ವಕವಾಗಿ ನಮ್ಮನ್ನು ತಡೆದರು ಹಾಗೂ ಸಾಮಾನ್ಯ ಜನರಿಗೆ ಸಮಸ್ಯೆ ಉಂಟು ಮಾಡಿದರು. ಸಂದೇಶಖಾಲಿಯಲ್ಲಿರುವ ಸಂತ್ರಸ್ತರನ್ನು ಭೇಟಿಯಾಗಲು ಪೊಲೀಸರು ನಮಗೆ ಅವಕಾಶ ನೀಡಲಿಲ್ಲ ಎಂದು ಡಾ. ಚಾರು ವಾಲಿ ಖನ್ನಾ ಅವರು ತಿಳಿಸಿದ್ದಾರೆ.
ಈ ನಡುವೆ ಬಂಧಿತ ಟಿಎಂಸಿ ನಾಯಕ ಶಿವಪ್ರಸಾದ್ ಹಾಝ್ರಾ ಅವರ ಕೋಳಿ ಸಾಕಣೆ ಘಟಕಕ್ಕೆ ಬೆಂಕಿ ಹಚ್ಚಿದ ಘಟನೆಯಲ್ಲಿ ಭಾಗಿಯಾದ ಆರೋಪದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ನಾಯಕಿ ಆಯಿಷಾ ಬೀಬಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದಾಂಧಲೆ ನಡೆಸಿದ ಆರೋಪದಲ್ಲಿ ಹಲವು ಗ್ರಾಮಸ್ಥರನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರತಿಭಟನೆ ಸಂದರ್ಭ ಆಯಿಷಾ ಬೀಬಿ ಅವರು ಕಾನೂನನ್ನು ಕೈಗೆತ್ತಿಕೊಂಡರು ಎಂದು ಅವರು ತಿಳಿಸಿದ್ದಾರೆ.







