ಹರ್ಯಾಣ | ದಲಿತ ಐಪಿಎಸ್ ಅಧಿಕಾರಿಯ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಎಸ್ಪಿಯ ಎತ್ತಂಗಡಿ

PC - indiatoday
ಚಂಡೀಗಢ: ದಲಿತ ಐಪಿಎಸ್ ಅಧಿಕಾರಿ ವೈ.ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಕೇಳಿ ಬಂದಿದ್ದ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ರೋಹ್ಟಕ್ ನ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಬಿಜರ್ನಿಯರನ್ನು ಹರ್ಯಾಣ ಸರಕಾರ ಹುದ್ದೆಯಿಂದ ಎತ್ತಂಗಡಿ ಮಾಡಿದೆ.
ಅವರ ಬದಲಿಗೆ ಸುರಿಂದರ್ ಸಿಂಗ್ ಭೋರಿಯಾರನ್ನು ರೋಹ್ಟಕ್ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಇಲ್ಲಿಯವರೆಗೆ ನರೇಂದ್ರ ಬಿಜರ್ನಿಯರಿಗೆ ಯಾವುದೇ ಹುದ್ದೆಯನ್ನು ನೀಡಿಲ್ಲ.
ತನ್ನ ಪತಿಗೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ, ಹರ್ಯಾಣ ಪೊಲೀಸ್ ಮಹಾ ನಿರ್ದೇಶಕ ಶತ್ರುಜೀತ್ ಕಪೂರ್, ರೋಹ್ಟಕ್ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳ ವಿರುದ್ಧ ಮೃತ ಪೂರಣ್ ಕುಮಾರ್ ಅವರ ಪತ್ನಿ ಅಮ್ನೀತ್ ಪೂರಣ್ ಕುಮಾರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಬೆನ್ನಿಗೇ, ಈ ಕ್ರಮ ಕೈಗೊಳ್ಳಲಾಗಿದೆ.
ತಮ್ಮ ಪತಿಯ ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿರುವ ಹಿರಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ಅವರನ್ನು ಬಂಧಿಸಬೇಕು, ನಮ್ಮ ಕುಟುಂಬಕ್ಕೆ ಭದ್ರತೆ ನೀಡಬೇಕು ಹಾಗೂ ನಮ್ಮ ಹಕ್ಕುಗಳಿಗೆ ರಕ್ಷಣೆ ಒದಗಿಸಬೇಕು ಎಂದು ಅಮ್ನೀತ್ ಪೂರಣ್ ಕುಮಾರ್ ತಮ್ಮ ದೂರಿನಲ್ಲಿ ಆಗ್ರಹಿಸಿದ್ದರು. ಅವರ ದೂರನ್ನು ಆಧರಿಸಿ, 13 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳ ಲಾಗಿದೆ.





