ಸೆಂಥಿಲ್ ಬಾಲಾಜಿ ಜಾಮೀನು ಅರ್ಜಿ 3ನೇ ಬಾರಿ ತಿರಸ್ಕೃತ
ವಿ. ಸೆಂಥಿಲ್ ಬಾಲಾಜಿ | Photo: PTI
ಚೆನ್ನೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಬಂಧಿತರಾಗಿರುವ ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಇಲ್ಲಿನ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಮೂರನೇ ಬಾರಿ ತಿರಸ್ಕರಿಸಿದೆ.
ಪ್ರಕರಣದಲ್ಲಿ ಸನ್ನಿವೇಶಗಳು ಬದಲಾಗಿಲ್ಲ ಎಂಬ ನೆಲೆಯಲ್ಲಿ ಡಿಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ಅವರ ಜಾಮೀನು ಅರ್ಜಿಯನ್ನು ಪ್ರಾಥಮಿಕ ಸೆಷನ್ಸ್ ನ್ಯಾಯಾಧೀಶ ಎಸ್. ಅಲಿ ತಿರಸ್ಕರಿಸಿದರು.
ಎಐಎಡಿಎಂಕೆ ಅಧಿಕಾರವಧಿಯಲ್ಲಿ ಸಾರಿಗೆ ಸಚಿವರಾಗಿದ್ದಾಗ ಹಣಕ್ಕಾಗಿ ಉದ್ಯೋಗ ಹಗರಣಕ್ಕೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ 2023 ಜೂನ್ 14ರಂದು ಬಾಲಾಜಿ ಅವರನ್ನು ಬಂಧಿಸಿತ್ತು.
ಬಂಧನವಾದ ಕೂಡಲೇ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅನಂತರ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಅವರನ್ನು ಕಸ್ಟಡಿಗೆ ತೆಗೆದುಕೊಂಡಿತ್ತು. ಬಳಿಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅವರ ಕಸ್ಟಡಿಯನ್ನು ನ್ಯಾಯಾಲಯ ನಿಯತಕಾಲಿಕವಾಗಿ ವಿಸ್ತರಿಸುತ್ತಾ ಬಂದಿತ್ತು.
ಜಾರಿ ನಿರ್ದೇಶನಾಲಯ ಆಗಸ್ಟ್ನಲ್ಲಿ ಸೆಂಥಿಲ್ ಬಾಲಾಜಿ ಅವರ ವಿರುದ್ಧ 3000 ಪುಟಗಳ ಆರೋಪ ಪಟ್ಟಿ ಸಲ್ಲಿಸಿತ್ತು. ಸೆಂಥಿಲ್ ಬಾಲಾಜಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಅಕ್ಟೋಬರ್ 19ರಂದು ತಿರಸ್ಕರಿಸಿತ್ತು.