ರೈಲುಗಳಲ್ಲಿ ಹಲಾಲ್ ಮಾಂಸ ಮಾತ್ರ ಬಳಕೆ | ಮೇಲ್ನೋಟಕ್ಕೆ ಮಾನವ ಹಕ್ಕುಗಳ ಉಲ್ಲಂಘನೆ: ರೈಲ್ವೆಗೆ NHRC ನೋಟಿಸ್

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ರೈಲುಗಳಲ್ಲಿ ಮಾಂಸಾಹಾರಿ ಭಕ್ಷ್ಯಗಳಲ್ಲಿ ಹಲಾಲ್ ಪ್ರಮಾಣೀಕೃತ ಮಾಂಸವನ್ನು ಮಾತ್ರ ಬಳಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ರೈಲ್ವೆ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ ಎಂದು barandbench.com ವರದಿ ಮಾಡಿದೆ.
ಮಾನವ ಹಕ್ಕುಗಳ ಆಯೋಗದ ಸದಸ್ಯ ಪ್ರಿಯಾಂಕ್ ಕನೂಂಗೊ ಅವರಿದ್ದ ಪೀಠವು, ಹಲಾಲ್ ಮಾಂಸವನ್ನು ಮಾತ್ರ ಬಳಕೆ ಮಾಡುವ ಪ್ರಕ್ರಿಯೆ ಮೂಲಭೂತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ. ಮಾಂಸ ವ್ಯಾಪಾರದಲ್ಲಿ ಸಾಂಪ್ರದಾಯಿಕವಾಗಿ ತೊಡಗಿರುವ ಪರಿಶಿಷ್ಟ ಜಾತಿ ಹಿಂದೂ ಸಮುದಾಯಗಳು ಹಾಗೂ ಇತರ ಮುಸ್ಲಿಮೇತರ ಸಮುದಾಯಗಳ ಜೀವನೋಪಾಯದ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಆಯೋಗವು ಉಲ್ಲೇಖಿಸಿದೆ.
ರೈಲ್ವೆಯು ಎಲ್ಲಾ ಧರ್ಮಗಳಿಗೆ ಸೇರಿದ ಪ್ರಯಾಣಿಕರ ಆಹಾರ ಆಯ್ಕೆಗಳನ್ನು ಗೌರವಿಸಬೇಕು ಎಂದು NHRC ಅಭಿಪ್ರಾಯಪಟ್ಟಿದೆ.
“ಹಲಾಲ್ ಮಾಂಸವನ್ನು ಮಾತ್ರ ಬಳಕೆ ಮಾಡುವ ಅಭ್ಯಾಸವು ಹಿಂದೂ ಎಸ್ಸಿ ಸಮುದಾಯಗಳು ಹಾಗೂ ಇತರ ಮುಸ್ಲಿಮೇತರ ಸಮುದಾಯಗಳ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಮೇಲ್ನೋಟಕ್ಕೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ,” ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ.
ರೈಲ್ವೆಗಳಲ್ಲಿ ಹಲಾಲ್ ಮಾಂಸವನ್ನು ಮಾತ್ರ ಬಳಸುವ ನೀತಿ ಧಾರ್ಮಿಕ ನಂಬಿಕೆಗಳಿಗೆ ತಕ್ಕಂತೆ ಆಹಾರ ಪಡೆಯುವ ಪ್ರಯಾಣಿಕರ ಹಕ್ಕುಗಳನ್ನೂ ಉಲ್ಲಂಘಿಸಿದಂತಾಗುತ್ತದೆ ಎಂದು ದೂರುದಾರರು ಆರೋಪಿಸಿದ್ದಾರೆ. ವಿಶೇಷವಾಗಿ ಹಿಂದೂ ಮತ್ತು ಸಿಖ್ ಧರ್ಮಕ್ಕೆ ಸೇರಿದ ಪ್ರಯಾಣಿಕರಿಗೆ ಅವರ ಧಾರ್ಮಿಕ ಆಚರಣೆಗಳಿಗೆ ಹೊಂದುವ ಆಹಾರ ಲಭ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ರೈಲುಗಳಲ್ಲಿ ಹಲಾಲ್ ಪ್ರಮಾಣಿತ ಆಹಾರ ಮಾತ್ರ ನೀಡುತ್ತಿರುವುದು ಭಾರತದ ಸಂವಿಧಾನದ ವಿಧಿ 14, 15, 19(1)(g), 21 ಮತ್ತು 25 ಅಡಿಯಲ್ಲಿ ಸಮಾನತೆ, ತಾರತಮ್ಯರಹಿತತೆ, ವೃತ್ತಿಸ್ವಾತಂತ್ರ್ಯ, ಘನತೆಯೊಂದಿಗೆ ಬದುಕುವ ಹಕ್ಕು ಹಾಗೂ ಧಾರ್ಮಿಕ ಸ್ವಾತಂತ್ರ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆ, 1993 ರ ಸೆಕ್ಷನ್ 12 ಅನ್ವಯ, NHRC ಈ ದೂರನ್ನು ಪರಿಗಣಿಸಿದ್ದು, ರೈಲ್ವೆ ಮಂಡಳಿಯಿಂದ ಎರಡು ವಾರಗಳ ಒಳಗೆ ಕ್ರಮ ಕೈಗೊಂಡಿರುವ ವರದಿ ಸಲ್ಲಿಸಲು ಸೂಚಿಸಿದೆ.







