ಸೇವಾ ವಿಕಾಸ್ ಬ್ಯಾಂಕ್ ಹಗರಣ: ಬಿಜೆಪಿ ನಾಯಕ ಅಮರ್ ಮೂಲ್ಚಂದಾನಿ ಇ.ಡಿ. ಕಸ್ಟಡಿಗೆ

Photo: PTI
ಮುಂಬೈ: 429 ಕೋಟಿ ರೂಪಾಯಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ನಾಯಕ ಹಾಗೂ ಸೇವಾ ವಿಕಾಸ್ ಕೋ-ಆಪರೇಟಿವ್ ಬ್ಯಾಂಕ್ನ ಮಾಜಿ ಅಧ್ಯಕ್ಷ ಅಮರ್ ಮೂಲ್ಚಂದಾನಿ ಅವರನ್ನು ಮುಂಬೈಯ ವಿಶೇಷ ನ್ಯಾಯಾಲಯ ಜುಲೈ 7ರ ವರೆಗೆ ಜಾರಿ ನಿರ್ದೇಶನಾಲಯ (ಇ.ಡಿ.) ಕಸ್ಟಡಿಗೆ ನೀಡಿದೆ.
ಪಿಂಪ್ರಿ ಚಿಂಚ್ವಾಡ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಮೂಲ್ಚಂದಾನಿ ಅವರು ಈ ಹಿಂದೆ ಕಾಂಗ್ರೆಸ್ನಲ್ಲಿ ಇದ್ದರು. 2016ರಲ್ಲಿ ಅವರು ಬಿಜೆಪಿಗೆ ಸೇರಿದ್ದರು. ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜುಲೈ 1ರಂದು ಬಂಧಿಸಲಾಗಿತ್ತು.
124 ಕಾರ್ಯನಿರ್ವಹಿಸದ ಆಸ್ತಿ ಸಾಲ ಖಾತೆಗಳಲ್ಲಿ ಬ್ಯಾಂಕ್ಗೆ 429 ಕೋ.ರೂ. ನಷ್ಟ ಉಂಟಾಗಲು ಕಾರಣವಾದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ‘‘ಇದರಿಂದ ಬ್ಯಾಂಕ್ ದೀವಾಳಿಯಾಯಿತು. ಅಲ್ಲದೆ, ಸಾವಿರಾರು ಸಣ್ಣ ಠೇವಣಿದಾರರು ನಷ್ಟ ಅನುಭವಿಸಿದರು’’ ಎಂದು ಜಾರಿ ನಿರ್ದೇಶನಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಂಕ್ನ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಾಲ ಸುಸ್ಥಿದಾರರು ಮೂಲ್ಚಂದಾನಿ ವಿರುದ್ಧ ಪುಣೆಯಲ್ಲಿ ದಾಖಲಿಸಿದ ಪ್ರಥಮ ಮಾಹಿತಿ ವರದಿಯ ಆಧಾರದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿ ಮೂಲ್ಚಂದಾನಿ ಅವರನ್ನು ಪಿಂಪ್ರಿ ಚಿಂಚ್ವಾಡ ಪೊಲೀಸರು 2021 ಆಗಸ್ಟ್ ನಲ್ಲಿ ಬಂಧಿಸಿದ್ದರು. ಆದರೆ, ಆರು ತಿಂಗಳಲ್ಲಿ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.







