ಉತ್ತರ ಪ್ರದೇಶ| ಗ್ರೇಟರ್ ನೋಯ್ಡಾದಲ್ಲಿ 'ಕಲುಷಿತ' ನೀರು ಕುಡಿದು ಹಲವರು ಅಸ್ವಸ್ಥ

ಸಾಂದರ್ಭಿಕ ಚಿತ್ರ (PTI)
ನೋಯ್ಡಾ: ಗ್ರೇಟರ್ ನೋಯ್ಡಾದ ಡೆಲ್ಟಾ 1 ಸೆಕ್ಟರ್ನಲ್ಲಿ ಹಲವಾರು ನಿವಾಸಿಗಳು ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಕಲುಷಿತ ನೀರು ಕುಡಿದು ಹಲವರು ಮೃತಪಟ್ಟ ಘಟನೆ ಬೆನ್ನಲ್ಲೆ ನಡೆದ ಈ ಬೆಳವಣಿಗೆ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಕುಡಿಯುವ ನೀರಿನ ಪೈಪ್ಲೈನ್ಲ್ಲಿ ಕೊಳಚೆ ನೀರು ಮಿಶ್ರಣವಾಗುವ ಕುರಿತು ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ಮತ್ತು ಬುಧವಾರ ನೋಯ್ಡಾದ ಡೆಲ್ಟಾ 1 ಸೆಕ್ಟರ್ ನ ಕೆಲವು ಭಾಗಗಳಲ್ಲಿ ನಲ್ಲಿ ನೀರು ಕುಡಿದ ನಂತರ ಹಲವರಲ್ಲಿ ವಾಂತಿ, ಜ್ವರ, ಹೊಟ್ಟೆ ನೋವು ಮೊದಲಾದ ಲಕ್ಷಣಗಳು ಕಂಡು ಬಂದಿದೆ. ನೀರು ಕುಡಿದ ನಂತರ ಸುಮಾರು ಆರರಿಂದ ಏಳು ಕುಟುಂಬಗಳ ಜನರಲ್ಲಿ ವಾಂತಿ, ಜ್ವರ ಮತ್ತು ಹೊಟ್ಟೆ ಉಬ್ಬರದಂತಹ ಲಕ್ಷಣಗಳು ಕಂಡು ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕುಡಿಯುವ ನೀರಿಗೆ ಕೊಳಚೆ ನೀರು ಮಿಶ್ರಿತವಾಗಿರುವುದನ್ನು ನಿರಾಕರಿಸಿದ್ದಾರೆ. ಇಲ್ಲಿಯವರೆಗೆ ನಡೆಸಿದ ಪರೀಕ್ಷೆಗಳಲ್ಲಿ ನೀರು ಶುದ್ಧವಾಗಿದೆ ಎಂದು ಕಂಡು ಬಂದಿದೆ ಎಂದು ಹೇಳಿದ್ದಾರೆ.





