ಮಿಜೋರಾಂ | ಭಾರಿ ಮಳೆಯಿಂದಾಗಿ ಐದು ಮನೆ, ಒಂದು ಹೋಟೆಲ್ ಕುಸಿತ: ಹಲವು ಮಂದಿ ಮೃತಪಟ್ಟಿರುವ ಶಂಕೆ

ಸಾಂದರ್ಭಿಕ ಚಿತ್ರ (PTI)
ಐಝ್ವಾಲ್: ದಕ್ಷಿಣ ಮಿಜೋರಾಂನ ಲೌಂಗ್ಟ್ಲಾಯಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಕಾರಣ, ಐದು ಮನೆ ಹಾಗೂ ಒಂದು ಹೋಟೆಲ್ ಕುಸಿದು ಬಿದ್ದಿದ್ದು, ಹಲವು ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೌಂಗ್ಟ್ಲಾಯಿಯಲ್ಲಿನ ಬಝಾರ್ ವೆಂಗ್ ಹಾಗೂ ಚಾಂದ್ಮೇರಿ ಪ್ರದೇಶಗಳ ಗಡಿ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳು ಹಾಗೂ ಹೋಟೆಲೊಂದು ಕುಸಿದು ಬಿದ್ದಿದ್ದರಿಂದ, ಶುಕ್ರವಾರ ರಾತ್ರಿ ಸುಮಾರು 10.30ಕ್ಕೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಹೊಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಹಲವಾರು ಮೈನ್ಮಾರ್ ಪ್ರಜೆಗಳು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಲೌಂಗ್ಟ್ಲಾಯಿ ಜಿಲ್ಲೆಯ ಬೃಹತ್ ನಾಗರಿಕ ಸೇವಾ ಸಂಘಟನೆಯಾದ ಯಂಗ್ ಲಾಯಿ ಅಸೋಸಿಯೇಷನ್ನೊಂದಿಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಮೂರನೆಯ ಭಾರತೀಯ ಮೀಸಲು ತುಕಡಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ವಿಸ್ತೃತ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರದಿಂದ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ಹಲವಾರು ಪ್ರದೇಶಗಳಲ್ಲಿ ಭೂಕುಸಿತ ಹಾಗೂ ಬೆಟ್ಟ ಕುಸಿತ ಸಂಭವಿಸುತ್ತಿವೆ ಎಂದು ವರದಿಯಾಗಿದೆ.







