ಮಣಿಪುರ | ಕಮ್ರೋಜ್ ಜಿಲ್ಲೆಯಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಿದ ಬಂಡುಕೋರರು: ಎರಡು ಗ್ರಾಮಗಳಲ್ಲಿ ಕರ್ಫ್ಯೂ ಜಾರಿ

PC : PTI
ಇಂಫಾಲ: ಅಪರಿಚಿತ ಸಶಸ್ತ್ರ ಬಂಡುಕೋರರು ಹಲವು ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಬುಧವಾರ ಬೆಳಗ್ಗೆ ಮಣಿಪುರದ ಕಮ್ರೋಜ್ ಜಿಲ್ಲೆಯಲ್ಲಿ ನಡೆದಿದ್ದು, ಇದರ ಬೆನ್ನಿಗೇ ಘಟನೆ ನಡೆದ ಎರಡು ಗ್ರಾಮಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಮ್ರೋಜ್ ಜಿಲ್ಲೆಯ ಸಹಂಫುಂಗ್ ಉಪ ವಿಭಾಗದ ಗಂಪಾಲ್ ಹಾಗೂ ಹೈಯಾಂಗ್ ಗ್ರಾಮಗಳ ಬಹುತೇಕ ನಿವಾಸಿಗಳು ಬಿತ್ತನೆಗಾಗಿ ಹೊಲಗಳಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಹುಲ್ಲು ಹಾಸಿನ ಹೊದಿಕೆ ಹೊಂದಿದ್ದ ಏಳು ಮನೆಗಳು ಈ ಘಟನೆಯಲ್ಲಿ ಸುಟ್ಟು ಭಸ್ಮವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯ ಬೆನ್ನಿಗೇ, ಕಮ್ರೋಜ್ ಜಿಲ್ಲೆಯ ಜಿಲ್ಲಾಧಿಕಾರಿ ರಂಗ್ನಮೇಯಿ ರಂಗ್ ಪೀಟರ್ ಅವರು ಬುಧವಾರ ಮಧ್ಯಾಹ್ನ ಎರಡು ಗಂಟೆಯಿಂದ ಎರಡೂ ಗ್ರಾಮಗಳಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಸಬ್ ಸೆಕ್ಷನ್ 1ರ ಅಡಿ, ಯಾವುದೇ ವ್ಯಕ್ತಿ ತನ್ನ ನಿವಾಸದಿಂದ ಹೊರಗೆ ಸಂಚರಿಸುವುದನ್ನೂ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನಿಷೇಧಿಸಿದ್ದಾರೆ.
ಈ ಕುರಿತು ಬಿಡುಗಡೆಯಾಗಿರುವ ಅಧಿಕೃತ ಆದೇಶದಲ್ಲಿ, “ಇಂತಹ ಅಡಚಣೆಗಳು ಗಂಭೀರ ಶಾಂತಿ ಭಂಗ, ಸಾರ್ವಜನಿಕ ಸೌಹಾರ್ದತೆಗೆ ಅಪಾಯ ಹಾಗೂ ಮನುಷ್ಯರ ಜೀವ ಹಾಗೂ ಆಸ್ತಿಪಾಸ್ತಿಗಳಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ” ಎಂದು ಜಿಲ್ಲಾಧಿಕಾರಿ ರಂಗ್ನಮೇಯಿ ರಂಗ್ ಪೀಟರ್ ಎಚ್ಚರಿಸಿದ್ದಾರೆ. ಆದರೆ, ಈ ನಿರ್ಬಂಧಗಳು ಕಾನೂನು ಮತ್ತು ಸುವ್ಯವಸ್ಥೆ ಅಥವಾ ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಸರಕಾರಿ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.







