ಮೌಂಟ್ ಅಬು ಹೆಸರು ಬದಲಾವಣೆ ಪ್ರಸ್ತಾವನೆಗೆ ಹಲವು ಸಂಘಟನೆಗಳಿಂದ ವಿರೋಧ

ಮೌಂಟ್ ಅಬು ಗಿರಿ | PC : wikipedia.org
ಜೈಪುರ: ರಾಜಸ್ಥಾನದ ಏಕೈಕ ಗಿರಿ ಪ್ರದೇಶವಾದ ಮೌಂಟ್ ಅಬು ಗಿರಿ ಪ್ರದೇಶದ ಹೆಸರನ್ನು ಬದಲಿಸುವ ಹಾಗೂ ಈ ಪ್ರದೇಶದಲ್ಲಿ ಮುಕ್ತವಾಗಿ ಮಾಂಸಾಹಾರ ಹಾಗೂ ಮದ್ಯ ಸೇವನೆ ಮಾಡುವುದನ್ನು ನಿಷೇಧಿಸುವ ಪ್ರಸ್ತಾವನೆಯ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ಹೆಸರು ಬದಲಾವಣೆ ವಿರುದ್ಧದ ಪ್ರತಿಭಟನೆಯನ್ನು ಬಿರುಸುಗೊಳಿಸಿವೆ.
ಈ ಪ್ರಸ್ತಾವನೆಯಿಂದ ಸ್ಥಳೀಯ ಆರ್ಥಿಕತೆಯ ಮೇಲೆ ಗಂಭೀರ ದುಷ್ಪರಿಣಾಮವುಂಟಾಗಲಿದೆ ಎಂದು ಪ್ರತಿಭಟನಾನಿರತ ಸಂಘಟನೆಗಳು ವಾದಿಸುತ್ತಿವೆ.
ಈ ಕುರಿತು ಎಪ್ರಿಲ್ 25ರಂದು ನಗರ ಪರಿಷತ್ ನ ಆಯುಕ್ತರಿಗೆ ಪತ್ರ ಬರೆದಿರುವ ಸ್ಥಳೀಯ ಸಂಸ್ಥೆಗಳ ಇಲಾಖೆಯು, ಅಬು ಮೌಂಟ್ ಗಿರಿ ಪ್ರದೇಶಕ್ಕೆ ಅಬುರಾಜ್ ತೀರ್ಥ್ ಎಂದು ಮರು ನಾಮಕರಣ ಮಾಡುವ ಹಾಗೂ ಈ ಗಿರಿ ಪ್ರದೇಶದ ಬಯಲಿನಲ್ಲಿ ಮಾಂಸಾಹಾರ ಮತ್ತು ಮದ್ಯ ಸೇವನೆಯನ್ನು ನಿಷೇಧಿಸುವ ಪ್ರಸ್ತಾವನೆ ಕುರಿತು ಅವರಿಂದ ವಾಸ್ತವ ಪ್ರತಿಕ್ರಿಯೆಯನ್ನು ಕೋರಿದೆ.
ಮೌಂಟ್ ಅಬು ಗಿರಿ ಪ್ರದೇಶದ ಧಾರ್ಮಿಕ ಮಹತ್ವವನ್ನು ಪರಿಗಣಿಸಿ, ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ನಗರ ಪರಿಷತ್ ನ ಮಂಡಳಿ ಸಭೆಯಲ್ಲಿ ಮೌಂಟ್ ಅಬು ಗಿರಿ ಪ್ರದೇಶದ ಹೆಸರನ್ನು ಗಿರಿರಾಜ್ ತೀರ್ಥ್ ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು. ಈ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ರವಾನಿಸಲಾಗಿದ್ದು, ಈ ಪ್ರಸ್ತಾವನೆಗೆ ರಾಜ್ಯ ಸರಕಾರವಿನ್ನೂ ಅನುಮೋದನೆ ನೀಡುವುದು ಬಾಕಿಯಿದೆ.
ಇದಾದ ನಂತರ, ಮುಖ್ಯಮಂತ್ರಿ ಭಜನ್ ಲಾಲ್ ಶರ್ಮರಿಗೆ ಪತ್ರ ಬರೆದಿದ್ದ ಹಲವು ಆಡಳಿತಾರೂಢ ಬಿಜೆಪಿ ಶಾಸಕರು, ಮೌಂಟ್ ಅಬು ಗಿರಿ ಪ್ರದೇಶದ ಧಾರ್ಮಿಕ ಮಹತ್ವವವನ್ನು ಪರಿಗಣಿಸಿ, ಅದರ ಹೆಸರನ್ನು ಮರು ನಾಮಕರಣ ಮಾಡಬೇಕು ಹಾಗೂ ಆ ಪ್ರದೇಶದ ಬಯಲಿನಲ್ಲಿ ಮಾಂಸಾಹಾರ ಮತ್ತು ಮದ್ಯಪಾನ ಸೇವನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದರು.
ಆದರೆ, ಈ ಪ್ರಸ್ತಾವನೆಗೆ ಬಲವಾದ ವಿರೋಧ ವ್ಯಕ್ತಪಡಿಸುತ್ತಿರುವ ಸ್ಥಳೀಯ ವ್ಯಾಪಾರಿಗಳು, ಮೌಂಟ್ ಅಬು ಜಗತ್ತಿನಾದ್ಯಂತ ತನ್ನ ಹೆಸರಿನಿಂದ ವಿಶ್ವವಿಖ್ಯಾತವಾಗಿದೆ ಹಾಗೂ ಅದರ ಹೆಸರನ್ನು ಬದಲಿಸುವುದರಿಂದ ಗೊಂದಲ ಸೃಷ್ಟಿಯಾಗಲಿದೆ. ಅಲ್ಲದೆ, ಈ ಪ್ರದೇಶದಲ್ಲಿ ಮಾಂಸಾಹಾರ ಮತ್ತು ಮದ್ಯಪಾನವನ್ನು ನಿಷೇಧಿಸುವುದರಿಂದ, ಈ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ, ಮೌಂಟ್ ಅಬು ಹೋಟೆಲ್ ಅಸೋಸಿಯೇಷನ್, ಲಘು ವ್ಯಾಪಾರ್ ಸಂಘ್, ಸಿಂಧಿ ಸೇವಾ ಸಮಾಜ್, ವಾಲ್ಮೀಕಿ ಸಮಾಜ್, ಮುಸ್ಲಿಂ ವಕ್ಫ್ ಕಮಿಟಿ ಹಾಗೂ ನಕ್ಕಿ ಲೇಕ್ ವ್ಯಾಪಾರ್ ಸಂಸ್ಥಾನ್ ಸೇರಿದಂತೆ ಒಟ್ಟು 23 ಸಂಘಟನೆಗಳು ಸೋಮವಾರ ಮುಖ್ಯಿಮಂತ್ರಿಯನ್ನುದ್ದೇಶಿಸಿ ಉಪ ವಿಭಾಗಾಧಿಕಾರಿ ಡಾ. ಅನ್ಷು ಪ್ರಿಯಾರಿಗೆ ಮನವಿ ಪತ್ರ ಸಲ್ಲಿಸಿವೆ.







