ತ್ರಿಪುರಾ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಂದ ಲೈಂಗಿಕ ದೌರ್ಜನ್ಯ ; ಅತ್ಯಾಚಾರ ಸಂತ್ರಸ್ತೆಯ ಆರೋಪ

ಸಾಂದರ್ಭಿಕ ಚಿತ್ರ
ಅಗರ್ತಲ : ತ್ರಿಪುರಾದ ನ್ಯಾಯಾಲಯವೊಂದರಲ್ಲಿ ಮ್ಯಾಜಿಸ್ಟ್ರೇಟ್ ಒಬ್ಬರು ತಮ್ಮ ಚೇಂಬರ್ ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆಯೊಬ್ಬರು ಆರೋಪಿಸಿದ್ದಾರೆ.
ಮಹಿಳೆಯ ಈ ಆರೋಪದ ಕುರಿತಂತೆ ಧಲಾಯಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಗೌತಮ್ ಸರ್ಕಾರ್ ನೇತೃತ್ವದ ಮೂವರು ಸದಸ್ಯರ ಸಮಿತಿ ತನಿಖೆ ಆರಂಭಿಸಿದೆ ಎಂದು ಹಿರಿಯ ನ್ಯಾಯವಾದಿಯೊಬ್ಬರು ರವಿವಾರ ತಿಳಿಸಿದ್ದಾರೆ.
ಅತ್ಯಾಚಾರಕ್ಕೆ ಸಂಬಂಧಿಸಿದ ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಫೆಬ್ರವರಿ 16ರಂದು ಕಮಲಾಪುರದ ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿ ಅವರ ಕೊಠಡಿಗೆ ತೆರಳಿದ ಸಂದರ್ಭ ಈ ಘಟನೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
‘‘ಹೇಳಿಕೆಯನ್ನು ದಾಖಲಿಸಿಕೊಳ್ಳಲು ಫೆಬ್ರವರಿ 16ರಂದು ನಾನು ಪ್ರಥಮ ದರ್ಜೆ ನ್ಯಾಯಾಂಗ ದಂಡಾಧಿಕಾರಿ ಅವರ ಕೊಠಡಿಗೆ ತೆರಳಿದ್ದೆ. ನಾನು ಹೇಳಿಕೆ ನೀಡುತ್ತಿರುವಾಗ ನ್ಯಾಯಮೂರ್ತಿ ನನ್ನ ಮೈ ಸವರಿದರು. ನಾನು ಕೂಡಲೇ ಅವರ ಕೊಠಡಿಯಿಂದ ಹೊರ ಬಂದೆ. ಘಟನೆಯ ಕುರಿತು ವಕೀಲರು ಹಾಗೂ ಪತಿಗೆ ಮಾಹಿತಿ ನೀಡಿದೆ’’ ಎಂದು ಅವರು ತಿಳಿಸಿದ್ದಾರೆ.
ಘಟನೆಯ ಕುರಿತಂತೆ ಮಹಿಳೆಯ ಪತಿ ಕೂಡ ಕಮಲಾಪುರ ಬಾರ್ ಅಸೋಸಿಯೇಶನ್ ಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಕಾರ್ಯಪ್ರವೃತ್ತವಾದ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಸತ್ಯಜಿತ್ದಾಸ್, ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಗೌತಮ್ ಸರ್ಕಾರ್ ಅವರು ಪ್ರಕರಣದ ತನಿಖೆಗೆ ಕಮಲಾಪುರ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರ ಕಚೇರಿಗೆ ಭೇಟಿ ನೀಡಿದ್ದಾರೆ.
ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರ ನೇತೃತ್ವದ ಮೂವರು ಸದಸ್ಯರ ಪೀಠ ನ್ಯಾಯಾಲಯದ ಆವರಣದಲ್ಲಿರುವ ಕಮಲಾಪುರ ಬಾರ್ ಅಸೋಸಿಯೇಶನ್ ನ ಸದಸ್ಯರನ್ನು ಭೇಟಿಯಾಗಿದೆ ಹಾಗೂ ಮಹಿಳೆಯ ಆರೋಪದ ಕುರಿತ ಅಭಿಪ್ರಾಯವನ್ನು ಕೋರಿದೆ. ‘‘ನಾವು ನಮ್ಮ ಅಭಿಪ್ರಾಯವನ್ನು ಸಮಿತಿಗೆ ತಿಳಿಸಿದ್ದೇವೆ’’ ಎಂದು ಕಮಲಾಪುರ ಬಾರ್ ಅಸೋಸಿಯೇಶನ್ ನ ಕಾರ್ಯದರ್ಶಿ ಶಿಬೇಂದ್ರ ದಾಸಗುಪ್ತಾ ಅವರು ತಿಳಿಸಿದ್ದಾರೆ.
ನ್ಯಾಯಮೂರ್ತಿ ವಿರುದ್ಧ ಆರೋಪದ ಕುರಿತು ಪ್ರತಿಕ್ರಿಯಿಸಿರುವ ತ್ರಿಪುರಾ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್, ‘‘ಈ ವಿಷಯದ ಕುರಿತಂತೆ ನಾವು ಇದುವರೆಗೆ ಯಾವುದೇ ಅಧಿಕೃತ ದೂರು ಸ್ವೀಕರಿಸಿಲ್ಲ. ರಾಜ್ಯದ ಇತರ ಜನರಂತೆ, ನಾನು ಕೂಡ ಇದನ್ನು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ತಿಳಿದುಕೊಂಡೆ. ನಾವು ಸೂಕ್ತ ರೀತಿಯಲ್ಲಿ ದೂರು ಸ್ವೀಕರಿಸಿದರೆ, ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇವೆ’’ ಎಂದು ಹೇಳಿದ್ದಾರೆ.







