ಮನಮೋಹನ್ ಸಿಂಗ್ ಭಾವಚಿತ್ರಕ್ಕೆ ತಡೆ: ಎಸ್ಜಿಪಿಸಿ ವಿರುದ್ಧ ತೀವ್ರ ಟೀಕೆ

ಡಾ.ಮನಮೋಹನ ಸಿಂಗ್ | PTI
ಹೊಸದಿಲ್ಲಿ: ಅಮೃತಸರದ ದರ್ಬಾರ್ ಸಾಹಿಬ್ ಸಂಕೀರ್ಣದಲ್ಲಿಯ ಕೇಂದ್ರ ಸಿಖ್ ವಸ್ತುಸಂಗ್ರಹಾಲಯದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಭಾವಚಿತ್ರವನ್ನು ಅಳವಡಿಸುವ ತನ್ನ ನಿರ್ಧಾರವನ್ನು ತಡೆಹಿಡಿದಿದ್ದಕ್ಕಾಗಿ ಶಿರೋಮಣಿ ಗುರುದ್ವಾರಾ ಪ್ರಬಂಧಕ ಸಮಿತಿ(ಎಸ್ಜಿಪಿಸಿ)ಯು ಸಿಖ್ ವಿದ್ವಾಂಸರು,ಲೇಖಕರು ಮತ್ತು ಇತಿಹಾಸಕಾರರಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ ಎಂದು indianexpress.com ವರದಿ ಮಾಡಿದೆ.
ಪಂಜಾಬಿನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಬಲ್ವಂತ್ ಸಿಂಗ್ ರಜೋನಾ ಆಕ್ಷೇಪಗಳನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಸ್ಜಿಪಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಎಸ್ಜಿಪಿಸಿಯ ಈ ಕ್ರಮವನ್ನು ತೀವ್ರ ನಿರಾಶಾದಾಯಕ ಮತ್ತು ರಾಜಕೀಯ ಪ್ರೇರಿತ ಎಂದು ಬಣ್ಣಿಸಿರುವ ಟೀಕಾಕಾರರು,ಅದು ಒತ್ತಡಕ್ಕೆ ಮಣಿದು ಜಾಗತಿಕವಾಗಿ ಗೌರವಾನ್ವಿತ ಸಿಖ್ ವ್ಯಕ್ತಿಯ ಪರಂಪರೆಯನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಡಾ.ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದು ತನ್ನ ಅರ್ಹತೆಯಿಂದ,ರಾಜಕೀಯ ಆನುವಂಶಿಕತೆಯಿಂದಲ್ಲ. 1984ರಲ್ಲಿ ಅವರು ಕಾಂಗ್ರೆಸ್ನ ಭಾಗವೂ ಆಗಿರಲಿಲ್ಲ. ಆ ದೃಷ್ಟಿಕೋನದಿಂದ ಅವರ ಬಗ್ಗೆ ನಿರ್ಧಾರ ತಳೆಯುವುದು ಅನ್ಯಾಯ ಮತ್ತು ಐತಿಹಾಸಿಕ ಅಸಡ್ಡೆಯಾಗುತ್ತದೆ ಎಂದು ಗುರು ನಾನಕ್ ದೇವ್ ವಿವಿಯ ಶ್ರೀಗುರು ಗ್ರಂಥ ಸಾಹಿಬ್ ಕುರಿತು ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಅಮರಜಿತ್ ಸಿಂಗ್ ಹೇಳಿದರು.
ದರ್ಬಾರ್ ಸಾಹಿಬ್ನ ಪವಿತ್ರ ಆವರಣದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಖಾಲಿಸ್ತಾನ್ ಪ್ರತಿಪಾದಕ ಜರ್ನೈಲ್ ಸಿಂಗ್ ಭಿಂದ್ರನವಾಲೆಯಿಂದ ಹಿಡಿದು ಲೆ.ಜ.ಜಗಜಿತ್ ಸಿಂಗ್ ಅರೋರಾ ಮತ್ತು ಏರ್ ಚೀಫ್ ಮಾರ್ಷಲ್ ಅರ್ಜನ್ ಸಿಂಗ್ರಂತಹ ಭಾರತೀಯ ಮಿಲಿಟರಿ ಅಧಿಕಾರಿಗಳವರೆಗೆ ವ್ಯಾಪಕ ಶ್ರೇಣಿಯ ಸಿಕ್ಖರ ಭಾವಚಿತ್ರಗಳಿವೆ.
ಎಸ್ಜಿಪಿಸಿ ಭಾವಚಿತ್ರ ಸ್ಥಾಪನೆಯ ನಿರ್ಧಾರವನ್ನು ಘೋಷಿಸಿದ ಬಳಿಕ ಅದರಿಂದ ಹಿಂದೆ ಸರಿದಿರುವುದು ಇದೇ ಮೊದಲು. ಇದು ಹಲವರು ಆರೋಪಿಸಿರುವಂತೆ ಪಾರದರ್ಶಕ ಮಾನದಂಡಗಳ ಕೊರತೆಯತ್ತ ಗಮನ ಸೆಳೆದಿದೆ.
ಡಾ.ಮನಮೋಹನ ಸಿಂಗ್ ಯಾವುದೇ ಸಮುದಾಯವು ಹೆಮ್ಮೆ ಪಡುವಂತಹ ಅಪರೂಪದ ವ್ಯಕ್ತಿಗಳಲ್ಲಿ ಓರ್ವರಾಗಿದ್ದಾರೆ. ಅವರು ಸಿಖ್ ಸಾಮೂಹಿಕ ಸ್ಮರಣೆಯ ಭಾಗವಾಗಿರಲೇಬೇಕು ಎಂದು ಜಗತ್ ಗುರು ನಾನಕ್ ದೇವ್ ಪಂಜಾಬ್ ರಾಜ್ಯ ಮುಖ್ಯ ವಿವಿಯ ಡೀನ್ ಸರಬ್ಜಿಂದರ್ ಸಿಂಗ್ ಹೇಳಿದರು.
ಅವರು ಗುರು ಗೋವಿಂದ್ ಸಿಂಗ್ಜಿ ನಿಧನರಾಗಿದ್ದ ನಾಂದೇಡ್ನ ಅಭಿವೃದ್ಧಿಗೆ 2,000 ಕೋಟಿ ರೂ.ಗೂ ಹೆಚ್ಚು ಹಣವನ್ನು ನೀಡಿದ್ದರು. ಅವರ ಭಾವಚಿತ್ರ ವಸ್ತು ಸಂಗ್ರಹಾಲಯದಲ್ಲಿ ಇರಬೇಕು ಎಂದರು.
ಶಿರೋಮಣಿ ಅಕಾಲಿ ದಳ(ಬಾದಲ್) ನಿಯಂತ್ರಿತ ಎಸ್ಜಿಪಿಸಿ ಡಾ.ಸಿಂಗ್ ಪ್ರಧಾನಿಯಾಗಿದ್ದಾಗ ಅವರೊಂದಿಗೆ ಆತ್ಮೀಯ ಸಂಬಂಧಗಳನ್ನು ಹಂಚಿಕೊಂಡಿದ್ದರೆ ಎಸ್ಎಡಿ(ಬಿ) ಸಿದ್ಧಾಂತವಾದಿ ಹರಚರಣ ಸಿಂಗ್ ಬೈನ್ಸ್ ಅವರು ರಜೋನಾ ಆಕ್ಷೇಪಣೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ರಜೋನಾನ ಭಾವನೆಯು 1984ರ ಘಟನಾವಳಿಗಳಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರಕ್ಕೆ ಸಂಬಂಧಿಸಿದೆ ಮತ್ತು ಅದನ್ನು ಡಾ.ಸಿಂಗ್ ಪ್ರತಿನಿಧಿಸಿದ್ದರು ಎಂದು ಅವರು ಹೇಳಿದರು.







